ಶಿವಮೊಗ್ಗ: ಜಿಲ್ಲೆಯಲ್ಲಿ ಕೊಲೆಗೆ ಪ್ರಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ ಹಾಗೂ ಮಾದಕ ವಸ್ತುಗಳ ಮಾರಾಟ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದ ಸಚಿನ್ ಎಂ.ಎಸ್. ಅಲಿಯಾಸ್ ಸಚಿನ್ ಅಲಿಯಾಸ್ ಶ್ಯಾಡೋ ಎಂಬಾತನ ವಿರುದ್ಧ ಜಿಲ್ಲಾಡಳಿತ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದೆ.
ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ, ಜಯನಗರ, ದೊಡ್ಡಪೇಟೆ, ಕೋಟೆ, ವಿನೋಬನಗರ ಹಾಗೂ ಆನಂದಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಚಿನ್ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕೊಲೆಗೆ ಪ್ರಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ, ಗಾಂಜಾ ಮಾರಾಟ ಮತ್ತು ಸಾಗಣೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಹಾಗೂ ಕೊಲೆ ಬೆದರಿಕೆ ಸೇರಿದಂತೆ ವಿವಿಧ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯ ಕಾನೂನು ಕ್ರಮಗಳಿಂದ ನಿಯಂತ್ರಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಕ್ರಮ
ಆರೋಪಿಯು ಕಾನೂನನ್ನು ಧಿಕ್ಕರಿಸಿ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಇಂತಹ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಸಾರ್ವಜನಿಕ ಆಸ್ತಿ ಹಾನಿ ಹಾಗೂ ಪ್ರಾಣಹಾನಿಯಂತಹ ಘಟನೆಗಳು ಸಂಭವಿಸುವ ಅಪಾಯವೂ ಇರುವುದಾಗಿ ಪೊಲೀಸ್ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ.
ಸಾಮಾನ್ಯ ಕಾನೂನು ಕ್ರಮಗಳ ಮೂಲಕ ಆತನ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಎಂಬ ಹಿನ್ನೆಲೆಯಲ್ಲಿ, ಕರ್ನಾಟಕ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು.
ಜಿಲ್ಲಾಧಿಕಾರಿಗಳಿಂದ ಬಂಧನ ಆದೇಶ
ಪೊಲೀಸ್ ಇಲಾಖೆಯ ವರದಿಯನ್ನು ಪರಿಶೀಲಿಸಿದ ಶಿವಮೊಗ್ಗ ಜಿಲ್ಲಾಧಿಕಾರಿಗಳು 2026ರ ನವೆಂಬರ್ 6ರಂದು ಸಚಿನ್‌ನನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿರಿಸುವ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಆರೋಪಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳಲ್ಲಿ ಇದೂ ಒಂದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದುಹೋದ 65 ಮೊಬೈಲ್ ಪತ್ತೆ, ನಗದು-ಚಿನ್ನದ ಬ್ಯಾಗ್ ಮಾಲೀಕರಿಗೆ ಹಸ್ತಾಂತರ
ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಕಳೆದುಹೋದ ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
65 ಮೊಬೈಲ್‌ಗಳು ಪತ್ತೆ: ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ CEIR (Central Equipment Identity Register) ಪೋರ್ಟಲ್ ಸಹಾಯದಿಂದ ಶಿಕಾರಿಪುರ ಗ್ರಾಮಾಂತರ ಪೊಲೀಸರು ಒಟ್ಟು 50 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ನವೆಂಬರ್ 7ರಂದು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಅದೇ ರೀತಿ ವಿನೋಬನಗರ ಪೊಲೀಸರು 15 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಜಿಲ್ಲೆಯ ಎರಡೂ ಪೊಲೀಸ್ ಕಾರ್ಯಾಚರಣೆಗಳಲ್ಲಿ ಒಟ್ಟು 65 ಮೊಬೈಲ್‌ಗಳು ಪತ್ತೆಯಾಗಿವೆ.
ನಗದು, ಚಿನ್ನಾಭರಣವಿದ್ದ ಬ್ಯಾಗ್ ವಾಪಸ್: ಮತ್ತೊಂದೆಡೆ, ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಜೋಗದ ಕಡೆ ಗಸ್ತಿನಲ್ಲಿದ್ದಾಗ ರಸ್ತೆಯ ಪಕ್ಕದಲ್ಲಿ ಅನಾಮಧೇಯ ಬ್ಯಾಗ್ ಪತ್ತೆಯಾಗಿದೆ. ಪರಿಶೀಲಿಸಿದಾಗ ಅದರಲ್ಲಿ ನಗದು, ಬೆಲೆಬಾಳುವ ವಸ್ತುಗಳು ಹಾಗೂ ದಾಖಲೆಗಳು ದೊರೆತಿವೆ. ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್‌ನ ಮೊಬೈಲ್ ಸಂಖ್ಯೆಯ ಮೂಲಕ ಮಾಲೀಕರನ್ನು ಸಂಪರ್ಕಿಸಿ, ಬ್ಯಾಗ್ ನಲ್ಲಿದ್ದ ಹಣ, ಚಿನ್ನಾಭರಣ ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ್ದಾರೆ.
ಈ ಕಾರ್ಯದಲ್ಲಿ ಪ್ರಾಮಾಣಿಕತೆ ಮೆರೆದ ಪಿಎಸ್ಐ ಶ್ರೀಪತಿ ಗಿನ್ನಿ ಹಾಗೂ ಸಿಬ್ಬಂದಿಗಳಾದ ಅಣ್ಣಪ್ಪ, ಪುರುಷೋತ್ತಮ್ ಮತ್ತು ಮಲ್ಲಪ್ಪ ಅವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.

