ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದು, ಪಕ್ಷವು ತುಂಡು ತುಂಡಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ಮಾಜಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಉಪ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ನಡುವೆ ಭಿನ್ನಾಭಿಪ್ರಾಯಗಳಿವೆ. ರಾಜ್ಯದಲ್ಲಿ ಅಭಿವೃದ್ಧಿ, ನೀರಾವರಿ ಹಾಗೂ ಬಡವರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಒಳಜಗಳವೇ ಮುನ್ನೆಲೆಗೆ ಬಂದಿದೆ ಎಂದು ಟೀಕಿಸಿದರು.
ಇದೆಲ್ಲವೂ ಡಿ.ಕೆ. ಶಿವಕುಮಾರ್ ಅವರ ಕುತಂತ್ರ ಎಂದು ಆರೋಪಿಸಿದ ಅಶೋಕ್, ಯಾರೂ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಬಾರದು ಎಂಬ ಉದ್ದೇಶದಿಂದ ಇಂತಹ ಬೆಳವಣಿಗೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಪ್ರತಿಭಟನೆ ನಡೆಸುವುದಾದರೆ ಗಾಂಧೀಜಿ ತೋರಿದ ಮಾರ್ಗದಲ್ಲಿ ನಡೆಸಬೇಕು. ಚಾಕು, ಚೂರಿ, ಮಚ್ಚು, ಲಾಂಗು ಹಿಡಿದು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರನ್ನು ಬೆದರಿಸಲು ಇಂತಹವರನ್ನು ಕಳುಹಿಸಲಾಗಿದೆ ಎಂದು ಆರೋಪಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಅಟೆಂಪ್ಟ್ ಟು ಮರ್ಡರ್ ಪ್ರಕರಣ ದಾಖಲಿಸಿ, ಪೊಲೀಸ್ ಇಲಾಖೆ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತೋರಿಸಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಡಿ.ಕೆ. ಶಿವಕುಮಾರ್ ಅವರೇ ನೇರ ಹೊಣೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಇನ್ನು ಒಂದು ವರ್ಷದ ಅವಧಿ ಮಾತ್ರ ಉಳಿದಿದೆ. ಅಭಿವೃದ್ಧಿ, ನೀರಾವರಿ ಹಾಗೂ ಬಡವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಕಾಂಗ್ರೆಸ್ನ ಸಂಸ್ಕೃತಿ ಮತ್ತೆ ಹೊರಬಂದಿದೆ ಎಂದು ಅಶೋಕ್ ಟೀಕಿಸಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಕಾಂಗ್ರೆಸ್ ಪಕ್ಷದ ನಿಜವಾದ ಮುಖ ಬಯಲಾಗಿದೆ ಎಂದು ಆರೋಪಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾದರೆ ತಾವು ಸಿದ್ಧರಿದ್ದೇವೆ. ನಾವು ಯಾವುದೇ ಆ ರೀತಿಯ ಮಾತುಗಳನ್ನು ಆಡಿಲ್ಲ, ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವನತಿ ಆರಂಭವಾಗಿದೆ ಎಂದು ಹೇಳಿದ ಅವರು, ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ನಮ್ಮೊಂದಿಗಿದೆ. ವಿಶ್ವದ ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಯಾವುದೇ ಬೆದರಿಕೆಗಳಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲುವುದೂ ಕಷ್ಟವಾಗಲಿದೆ ಎಂದು ಭವಿಷ್ಯ ನುಡಿದರು.
ಎಥನಾಲ್ ಮಿಶ್ರಣದ ಬಗ್ಗೆಯೂ ಪ್ರಶ್ನೆ
ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಎಥನಾಲ್ ಪ್ರಮಾಣವನ್ನು ಪರಿಶೀಲಿಸಲು ರಾಜ್ಯದ ಬಳಿ ಅಗತ್ಯ ಗುಣಮಟ್ಟದ ಪರೀಕ್ಷಾ ವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದರು. ಪೆಟ್ರೋಲ್ ಬಂಕ್ಗಳಲ್ಲಿಯೇ ಮಿಶ್ರಣ ಮಾಡಿದರೆ ಅದನ್ನು ಹೇಗೆ ನಿಯಂತ್ರಿಸಲಾಗುತ್ತದೆ ಮತ್ತು ನಿಗದಿತ ಪ್ರಮಾಣದಲ್ಲಿಯೇ ಎಥನಾಲ್ ಮಿಶ್ರಣವಾಗಿದೆ ಎಂಬುದಕ್ಕೆ ಏನು ಖಾತರಿ ಎಂದು ಪ್ರಶ್ನಿಸಿದರು.
ಎಥನಾಲ್ ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ದೇಶದ ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ ರಾಜ್ಯದಲ್ಲಿನ ಇತರೆ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಅಶೋಕ್ ಆಗ್ರಹಿಸಿದರು. ಹಾಲಿನ ಗುಣಮಟ್ಟ, ಅಕ್ಕಿಯಲ್ಲಿ ಕಲಬೆರಕೆ, ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳು ಹಾಗೂ ಕಾವೇರಿ ನೀರಿನ ಮಾಲಿನ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಬರ ಪರಿಹಾರ ವಿಚಾರದಲ್ಲಿ ಸರ್ಕಾರದ ವಿರುದ್ಧ ಟೀಕೆ
ಬರ ಪರಿಹಾರವನ್ನು ಹಂತ ಹಂತವಾಗಿ ನೀಡುವ ಸರ್ಕಾರದ ನಿರ್ಧಾರವನ್ನೂ ಅಶೋಕ್ ಟೀಕಿಸಿದರು. ಚುನಾವಣೆಗೂ ಮುನ್ನ ಜನರಿಗೆ ತಿಂಗಳಿಗೆ ತಪ್ಪದೆ ಹಣ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್, ಇದೀಗ ತೆರಿಗೆ ಪಾವತಿಸಿ ಸರ್ಕಾರ ಹಣ ನೀಡುತ್ತದೆ ಎಂಬ ರೀತಿಯಲ್ಲಿ ಮಾತನಾಡುತ್ತಿದೆ ಎಂದು ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಅವರು ಒಂದು ಹೇಳಿ ಮತ್ತೊಂದು ಮಾಡುತ್ತಿದ್ದಾರೆ ಎಂದು ಟೀಕಿಸಿದ ಅಶೋಕ್, ಸರ್ಕಾರದ ನೀತಿಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ದೂರಿದರು.
ಗೃಹಲಕ್ಷ್ಮೀ ಹಣ ನೀಡುವಂತೆ ಆಗ್ರಹ
ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣದ ವಿಚಾರವಾಗಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಿಳೆಯರಿಗೆ ಬಾಕಿ ಇರುವ ₹5,000 ಹಣವನ್ನು ಸರ್ಕಾರ ನೀಡಲೇಬೇಕು ಎಂದು ಆಗ್ರಹಿಸಿದರು.
ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮಹಿಳಾ ಅಭಿವೃದ್ಧಿ ಖಾತೆಗೆ ವರ್ಗಾಯಿಸಿರುವ ಕುರಿತು ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ವಿಚಾರಕ್ಕೂ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣೆಗೂ ಮುನ್ನ ಮಹಿಳೆಯರಿಗೆ ₹2,000 ನೀಡುವುದಾಗಿ ಭರವಸೆ ನೀಡಿ ಮತ ಪಡೆದ ಬಳಿಕ ಬೇರೆ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈ ವಿಚಾರವನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸ್ಥಾನವನ್ನು ಜನರು ನೀಡಿರುವ ಜವಾಬ್ದಾರಿ ಎಂದು ಹೇಳಿದ ಅಶೋಕ್, ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂದು ಆರೋಪಿಸಿದರು. ಈ ಸರ್ಕಾರ ಇನ್ನೂ ಒಂದು ವರ್ಷ ಪೂರ್ಣಗೊಳಿಸುತ್ತದೆಯೇ ಎಂಬುದೇ ಅನುಮಾನವಾಗಿದೆ. ಸಿದ್ದರಾಮಯ್ಯ ಅವರೇ ಸರ್ಕಾರಕ್ಕೆ ಹಳ್ಳ ತೋಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಸರ್ಕಾರ ಯಾವಾಗ ಪತನಗೊಳ್ಳುತ್ತದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

