ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ಗೆ ತಮ್ಮ ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು 5 ದಿನಗಳ ಕಾಲ ಹೈಕೋರ್ಟ್ ಅನುಮತಿ ನೀಡಿದೆ.
ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಇಂದಿನಿಂದ 5 ದಿನಗಳ ಕಾಲ ಅನುಮತಿ ನೀಡಿದ್ದು, ಬೆಳಿಗ್ಗೆ 8 ರಿಂದ ಸಂಜೆ 6ರವರೆಗೆ ಸಮಯ ನೀಡಿದೆ. ಈ ಹಿನ್ನೆಲೆ ಪ್ರದೋಷ್ ಪರ ವಕೀಲರು 59ನೇ ಸೆಷನ್ಸ್ ಕೋರ್ಟ್ಗೆ ಹೈಕೋರ್ಟ್ ಅನುಮತಿ ಆದೇಶ ಸಲ್ಲಿಕೆ ಮಾಡಿದ್ದಾರೆ.
ಜೊತೆಗೆ ಸೆಷನ್ಸ್ ಕೋರ್ಟ್ 1 ಲಕ್ಷ ರೂ. ಬಾಂಡ್ ಸೇರಿ ಹಲವು ಷರತ್ತು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಮಾಡಬಾರದು. ಪ್ರಕರಣದ ಸಾಕ್ಷಿಗಳ ಜೊತೆ ಸಂರ್ಪಕ ಮಾಡಬಾರದು. ಪ್ರಕರಣ ಸಂಬಂಧ ಅಧಿಕಾರಿಗಳ ಜೊತೆ ಸಾಕ್ಷಿ ಪ್ರದೋಷ್ ಮಾತನಾಡಬಾರದು. ತಿಥಿ ಕಾರ್ಯದಲ್ಲಿ ಭಾಗವಹಿಸುವ ಕುಟುಂಬಸ್ಥರ ಮಾಹಿತಿ ಕೋರ್ಟ್ಗೆ ನೀಡಬೇಕು. ಪ್ರತಿದಿನ 6 ಗಂಟೆ ಒಳಗೆ ಪ್ರದೋಷ್ ಜೈಲಿನ ಒಳಗೆ ವಾಪಸ್ಸು ಬರಬೇಕು. ಕಾರ್ಯದಲ್ಲಿ ಭಾಗವಹಿಸುವ ಅಡುಗೆ ಭಟ್ಟರು, ಪೂರೋಹಿತರ ಮಾಹಿತಿ ನೀಡಬೇಕು ಎಂದು ಷರತ್ತು ವಿಧಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ಈಗ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ.
ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಒಪ್ಪಿಕೊಂಡಿದ್ದು, ನಟ ದರ್ಶನ್ ಪರ ವಕೀಲರು ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸುಪ್ರೀಂಕೋರ್ಟ್ ವರೆಗೂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಾಲಯದ ಮುಂದೆ ಪ್ರದೋಷ್ ಅವರು ರೇಣುಕಾಸ್ವಾಮಿ ಕೊಲೆ ಹಾಗೂ ಕೃತ್ಯದಲ್ಲಿ ಇತರ ಆರೋಪಿಗಳ ಪಾತ್ರದ ಕುರಿತು ತಮ್ಮ ಸಾಕ್ಷ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ.
ಈ ನಡುವೆ ತಮ್ಮ ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಕರ್ನಾಟಕ ಹೈಕೋರ್ಟ್ ಪ್ರದೋಷ್ಗೆ ನವೆಂಬರ್ 7 ರಿಂದ 12ರ ವರೆಗೆ 5 ದಿನಗಳ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಮಾಫಿ ಸಾಕ್ಷಿಯಾಗಿರುವುದರಿಂದ ಅವರು ಸತ್ಯವಾದ ಮತ್ತು ಸಂಪೂರ್ಣ ಮಾಹಿತಿ ನೀಡಬೇಕಿದೆ ಮತ್ತು ವಿಚಾರಣೆ ಮುಗಿಯುವವರೆಗೆ ಕಸ್ಟಡಿಯಲ್ಲಿ ಇರಬೇಕಾಗುತ್ತದೆ.

