ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತೆಗೆ ಸಂಬಂಧಿಸಿದಂತೆ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ‘ವಾಷಿಂಗ್ಟನ್ಗೆ ಹೋಗಿ ಟ್ರಂಪ್ ಅವರನ್ನು ಹತ್ಯೆ ಮಾಡು’ ಎಂದು ತನ್ನ ತಲೆಯೊಳಗೆ ಧ್ವನಿಗಳು ಕೇಳಿಸುತ್ತಿದ್ದವು ಎಂದು ಹೇಳಿಕೊಂಡ ವೆನೆಜುವೆಲಾ ಮೂಲದ ವ್ಯಕ್ತಿಯೊಬ್ಬನನ್ನು ವೈಟ್ಹೌಸ್ ಸಮೀಪ ಬಂಧಿಸಲಾಗಿದೆ. ಆತನ ಬಳಿ ಮೂರು ಬಂದೂಕುಗಳು ಮತ್ತು ಡಜನ್ಗಟ್ಟಲೆ ಗುಂಡುಗಳು ಪತ್ತೆಯಾಗಿರುವುದು ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ.
ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯ ವರ್ತನೆಯಿಂದ ಅನುಮಾನ!
ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಕ್ರಿನೋಸ್ (Ronny Yordrix Guanipa Chrinos) ಬಂಧಿತ ವ್ಯಕ್ತಿ. ಗುರುವಾರ ರಾತ್ರಿ ವೈಟ್ಹೌಸ್ ಸಮೀಪ ನಿಲ್ಲಿಸಿದ್ದ ಕಾರಿನಲ್ಲಿ ಈತ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗಮನಿಸಿದ್ದಾರೆ.
ತಕ್ಷಣ ಆತನ ಬಳಿ ತೆರಳಿದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ನೀಡಿದ ಹೇಳಿಕೆ ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ. ತಾನು ವಾಷಿಂಗ್ಟನ್ಗೆ ಬಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಬೇಕೆಂದು ತನ್ನ ತಲೆಯೊಳಗೆ ಧ್ವನಿಗಳು ಸೂಚಿಸುತ್ತಿದ್ದವು ಎಂದು ಆತ ಹೇಳಿರುವುದಾಗಿ ವರದಿಯಾಗಿದೆ.
ಕಳವು ಮಾಡಿದ ಕಾರಿನಲ್ಲಿ ಮೂರು ಬಂದೂಕು!
ಆರೋಪಿಯ ಕಾರನ್ನು ಪರಿಶೀಲಿಸಿದಾಗ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆತ ಕುಳಿತಿದ್ದ ವಾಹನ ಕಳವಾಗಿರುವ ಕಾರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಕಾರಿನಲ್ಲಿ ಶೋಧ ನಡೆಸಿದಾಗ ಮೂರು ಬಂದೂಕುಗಳು ಮತ್ತು ಅಪಾರ ಪ್ರಮಾಣದ ಗುಂಡುಗಳು ಪತ್ತೆಯಾಗಿವೆ.
ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಯುಎಸ್ ಮಾರ್ಷಲ್ಸ್ ಸರ್ವಿಸ್ ವಶಕ್ಕೆ ಒಪ್ಪಿಸಲಾಗಿದೆ.
ಯಾರು ಈ ಆರೋಪಿ? ಅಮೆರಿಕಕ್ಕೆ ಬಂದಿದ್ದೇಕೆ?
ಬಂಧಿತ ವ್ಯಕ್ತಿ ವೆನೆಜುವೆಲಾ ಮೂಲದ ಪ್ರಜೆಯಾಗಿದ್ದು, 2024ರ ಮಾರ್ಚ್ನಲ್ಲಿ ಟೆಕ್ಸಾಸ್ ಮೂಲಕ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ತಿಳಿಸಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್ವೇನ್ ಮುಲ್ಲಿನ್, ಮೂವರು ಬಂದೂಕುಗಳನ್ನು ಹೊಂದಿದ್ದ ವ್ಯಕ್ತಿಯನ್ನು ಯಾರಿಗೂ ಹಾನಿ ಮಾಡುವ ಮುನ್ನವೇ ಬಂಧಿಸಿದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಟ್ರಂಪ್ ಭದ್ರತೆ ಮತ್ತೆ ಚರ್ಚೆಗೆ!
ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಈ ಹಿಂದೆಯೂ ಹಲವು ಬೆದರಿಕೆಗಳು ಮತ್ತು ಭದ್ರತಾ ಆತಂಕದ ಘಟನೆಗಳು ವರದಿಯಾಗಿದ್ದವು. ಇದೀಗ ವೈಟ್ಹೌಸ್ ಸಮೀಪವೇ ಮೂರು ಬಂದೂಕುಗಳೊಂದಿಗೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವುದು ಮತ್ತೊಮ್ಮೆ ಅಧ್ಯಕ್ಷರ ಭದ್ರತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಆದರೆ, ಆರೋಪಿಯು ಟ್ರಂಪ್ ಹತ್ಯೆಗೆ ನಿಜವಾಗಿಯೂ ಸಂಚು ರೂಪಿಸಿದ್ದನೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

