ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕೆಲ ದಿನಗಳ ಹಿಂದಷ್ಟೇ ವಿಮಾನ ಪತನಗೊಂಡು ದುರಂತದಲ್ಲಿ ಬೆಂಗಳೂರಿನ ಐವರು ಸೇರಿ ಆರು ಜನರು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಕಾರು ಭೀಕರ ಅಪಘಾತಕ್ಕೀಡಾಗಿ ನದಿಗೆ ಉರುಳಿ ಬಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಯಾತ್ರಿಕರು ಪ್ರಯಾಣಿಸುತ್ತಿದ್ದ ಕಾರು, ರಸ್ತೆಯಿಂದ ನದಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಗಂಗ್ನಾನಿ ಬಳಿ ಗುರುವಾರ ಪ್ರಯಾಣಿಕರಿದ್ದ ವಾಹನವೊಂದು ನದಿಗೆ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.
UK08TA6040 ನೋಂದಣಿ ಸಂಖ್ಯೆಯ ‘ಇನೋವಾ’ (Innova) ಕಾರು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದು, ಉರುಳುತ್ತಾ ನದಿಗೆ ಹೋಗಿ ಬಿದ್ದಿದೆ. ಗಂಗ್ನಾನಿ ಧರ್ಮಕುಂಡ್‌ನಿಂದ ಸುಮಾರು 20 ಮೀಟರ್‌ಗಳಷ್ಟು ಮುಂದಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯ ದಡದಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ವಾಹನದಲ್ಲಿ ಇನ್ನೂ ಯಾರಾದರೂ ಇದ್ದರೇ ಎಂದು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯ ಮುಂದುವರಿದಿದೆ.
ಅಪಘಾತದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು 108 ತುರ್ತು ಆಂಬ್ಯುಲೆನ್ಸ್ ಸೇವಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದವು. ರಕ್ಷಣಾ ಮತ್ತು ಪರಿಹಾರ ತಂಡಗಳು ಸ್ಥಳವನ್ನು ತಲುಪಿ, ನದಿ ದಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸುತ್ತಿವೆ.
“ರಕ್ಷಣಾ ಕಾರ್ಯಾಚರಣೆಯ ವೇಳೆ ತಂಡಗಳಿಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ಇತರರಿಗಾಗಿ ಹುಡುಕಾಟ ನಡೆಸುತ್ತಿವೆ” ಎಂದು ವಿಪತ್ತು ನಿರ್ವಹಣಾ ಅಧಿಕಾರಿ ಶಾರ್ದೂಲ್ ಗುಸಾಯಿ ತಿಳಿಸಿದ್ದಾರೆ.
“ವಾಹನದಲ್ಲಿ ಇನ್ನೂ ಕೆಲವರು ಪ್ರಯಾಣಿಸಿರಬಹುದು ಎಂಬ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವಷ್ಟೇ, ಅಪಘಾತದಲ್ಲಿ ನಾಪತ್ತೆಯಾದವರು ಮತ್ತು ಮೃತಪಟ್ಟವರ ನಿಖರ ಸಂಖ್ಯೆ ತಿಳಿಯಲಿದೆ” ಎಂದು ಅವರು ಹೇಳಿದರು.
ಅಪಘಾತ ನಡೆದ ಸ್ಥಳವು ಅತ್ಯಂತ ದುರ್ಗಮವಾಗಿರುವುದು ಮತ್ತು ನದಿಯ ನೀರಿನ ಹರಿವು ತೀವ್ರವಾಗಿರುವುದರಿಂದ, ರಕ್ಷಣಾ ತಂಡಗಳು ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನದಿಯಿಂದ ಯಾರಾದರೂ ಜೀವಂತವಾಗಿ ಪತ್ತೆಯಾದರೆ, ಅವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ವಿಪತ್ತು ನಿರ್ವಹಣಾ ಕೇಂದ್ರ ಮತ್ತು ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
“ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಲು ಜಿಲ್ಲಾಡಳಿತವೂ ಪ್ರಯತ್ನಿಸುತ್ತಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.

