ಅಮರಾವತಿ: ಮುರುಸು ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆ. ಚಂಡಮಾರುತದ ಹೊಡೆತಕ್ಕೆ ತಮಿಳುನಾಡಿನ ಮೀನುಗಾರರಿದ್ದ ದೋಣಿಯೊಂದು ಸಿಲುಕಿ ಪಲ್ಟಿಯಾಗಿದ್ದು, ನಾಲ್ವರು ಮೀನುಗಾರರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ನಾಲ್ವರು ಮೀನುಗಾರರು ಮೃತಪಟ್ಟಿದ್ದಾರೆ. ಉಳಿದ ಐವರು ನಾಪತ್ತೆಯಾಗಿದ್ದರೆ. ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ದೋಣಿಯಲ್ಲಿದ್ದ ಉಳಿದ ಐವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟು ಒಂಬತ್ತು ಮೀನುಗಾರರು ಈ ದೋಣಿಯಲ್ಲಿದ್ದರು. ಚಂಡಮಾರುತದ ಹಿನ್ನೆಲೆಯಲ್ಲಿ ದೋಣಿ ಸಮುದ್ರದಲ್ಲಿ ಪಲ್ಟಿಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರಕಾಶಂ ಜಿಲ್ಲಾಧಿಕಾರಿ ಪಿ. ರಾಜಾ ಬಾಬು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 29ರಂದು ಮೀನುಗಾರರು ಚೆನ್ನೈನಿಂದ ಸಮುದ್ರಕ್ಕೆ ತೆರಳಿದ್ದರು. ಈ ನಡುವೆ ಚಂಡಮಾರುತ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ದೋಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು. ಅದರಂತೆ ನಾಲ್ಕು ದೋಣಿಗಳನ್ನು ಆಂಧ್ರಪ್ರದೇಶದ ಕರಾವಳಿಯಲ್ಲಿ ಲಂಗರು ಹಾಕಲಾಗಿತ್ತು. ಮೂರು ದೋಣಿಗಳನ್ನು ರಾಮಯಪಟ್ಟಣಂ ಬಂದರಿನಲ್ಲಿ ಹಾಗೂ ಮತ್ತೊಂದು ದೋಣಿಯನ್ನು ನಿಜಾಂಪಟ್ಟಣಂ ಬಂದರಿನಲ್ಲಿ ನಿಲ್ಲಿಸಲಾಗಿತ್ತು.
ನಾಪತ್ತೆಯಾಗಿದ್ದ ಮೀನುಗಾರರ ಪೈಕಿ ಮೂವರ ಮೃತದೇಹಗಳು ಕೊತಪಟ್ಟಣಂ ಕರಾವಳಿಯಲ್ಲಿ ಪತ್ತೆಯಾಗಿವೆ. ಮತ್ತೊಬ್ಬರ ಮೃತದೇಹವನ್ನು ಶೋಧ ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಗಿದೆ. ನಾಲ್ವರ ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿ, ಶವಾಗಾರದಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ರಾಜಾ ಬಾಬು ಮಾಅಹಿತಿ ನೀಡಿದ್ದು, ತಮಿಳುನಾಡಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ಆಗಮಿಸುತ್ತಿದ್ದು, ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ಅವರಿಗೆ ಹಸ್ತಾಂತರಿಸಲಾಗುವುದು. ಅಲ್ಲದೆ, ಪಲ್ಟಿಯಾದ ದೋಣಿಯನ್ನು ಸಮುದ್ರದಿಂದ ದಡಕ್ಕೆ ತರುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಪ್ರಕಾರ, ನವೆಂಬರ್ 2ರಂದು ತಮಿಳುನಾಡಿನ ಅಧಿಕಾರಿಗಳು ಎಲ್ಲಾ ಮೀನುಗಾರರು ಮತ್ತು ಅವರ ದೋಣಿಗಳು ಸುರಕ್ಷಿತ ಬಂದರುಗಳಲ್ಲಿರುವುದಾಗಿ ದೃಢಪಡಿಸಿದ್ದರು. ಆದರೆ, ನವೆಂಬರ್ 3ರಂದು ನಿಜಾಂಪಟ್ಟಣಂ ಬಂದರಿನಲ್ಲಿ ಲಂಗರು ಹಾಕಿದ್ದ ದೋಣಿಯಲ್ಲಿದ್ದ ಒಂಬತ್ತು ಮೀನುಗಾರರು ತಮ್ಮ ಸಹ ಮೀನುಗಾರರನ್ನು ಸೇರಲು ರಾಮಯಪಟ್ಟಣಂ ಕಡೆಗೆ ಪ್ರಯಾಣ ಆರಂಭಿಸಿದ್ದರು.
ಈ ಪ್ರಯಾಣದ ಕುರಿತು ಆಂಧ್ರಪ್ರದೇಶ ಅಥವಾ ತಮಿಳುನಾಡಿನ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ರಾಮಯಪಟ್ಟಣಂ ಕಡೆಗೆ ತೆರಳುತ್ತಿದ್ದ ವೇಳೆ ತೀವ್ರ ಚಂಡಮಾರುತ ಮತ್ತು ಬಿರುಗಾಳಿಗೆ ದೋಣಿ ಸಿಲುಕಿಕೊಂಡು ಪಲ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಲಾಗಿತ್ತು. ಅಲ್ಲದೆ, ನಾಪತ್ತೆಯಾದ ಒಂಬತ್ತು ಮೀನುಗಾರರ ಹೆಸರು ಮತ್ತು ಭಾವಚಿತ್ರಗಳನ್ನು ತಮಿಳುನಾಡು ಸರ್ಕಾರ ಗುರುತಿಸಿ ಅಧಿಕಾರಿಗಳಿಗೆ ನೀಡಿತ್ತು. ಸದ್ಯ ನಾಲ್ವರು ಮೀನುಗಾರರ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಐವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

