ಪ್ರತಿಯೊಬ್ಬ ಮಹಿಳೆಯ ಗರ್ಭಧಾರಣೆ ಹಾಗೂ ಹೆರಿಗೆಯ ಅನುಭವವೂ ವಿಶಿಷ್ಟವಾಗಿರುತ್ತದೆ. ಆದರೆ ಸಮಾಜದಲ್ಲಿ ಗರ್ಭಿಣಿಯರು ಅಥವಾ ತಾಯಂದಿರು ಏನೇ ಮಾಡಿದರೂ ಅವರ ನಡೆ-ನುಡಿಗಳನ್ನು ತೀರ್ಪು ಮಾಡುವುದು ಮುಂದುವರಿಯುತ್ತಲೇ ಇರುತ್ತದೆ. ಇತ್ತೀಚೆಗೆ ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್ ಹಾಗೂ ಎಂಜಿನಿಯರ್ ಮೈರಾ ಶರ್ಮಾ ಅವರು ತಮಗೆ ಹೆರಿಗೆ ನೋವು ಬರುವ ಸಮಯದಲ್ಲಿ ಲಿಪ್ಸ್ಟಿಕ್ ಹಚ್ಚಿ ಸಿದ್ಧರಾದ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ಅದಕ್ಕೆ ನೀಡಿದ ಸ್ಪಷ್ಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಹಂಚಿಕೊಂಡ ಮೈರಾ, ಹೆರಿಗೆ ನೋವಿನ ಅಲೆಗಳು ಬರುತ್ತಿರುವಾಗಲೇ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದನ್ನು ಕಾಣಬಹುದು. ಯಾರಾದರೂ ತಮ್ಮನ್ನು ಜಡ್ಜ್ ಮಾಡುವ ಮುನ್ನ ಕ್ಯಾಪ್ಷನ್ ಓದುವಂತೆ ಮನವಿ ಮಾಡಿದ ಅವರು, ತಾವು ಹೀಗೆ ಮಾಡಲು ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ನೋವು ಮರೆಯಲು ಮತ್ತು ಅನುಭವಿಸಲು ಈ ನಿರ್ಧಾರ
-
ಗಮನ ಬೇರೆಡೆ ಸೆಳೆಯಲು: ಹೆರಿಗೆ ನೋವಿನ ಸಮಯದಲ್ಲಿ ಮಂಚದ ಮೇಲೆ ರೋಗಿಯಂತೆ ಮಲಗಿ ಚೀರಾಡುವ ಬದಲು, ತಮ್ಮ ಗಮನವನ್ನು ನೋವಿನಿಂದ ಬೇರೆಡೆಗೆ ಸೆಳೆಯಲು ಮೇಕಪ್ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.
-
ಗರ್ಭಧಾರಣೆ ಕಾಯಿಲೆಯಲ್ಲ: “ಗರ್ಭಧಾರಣೆ ಎಂಬುದು ಯಾವುದೇ ಕಾಯಿಲೆಯಲ್ಲ. ಇದು ನನ್ನ ಎರಡನೇ ಹೆರಿಗೆಯಾಗಿದ್ದು, ನಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ನನಗಿತ್ತು” ಎಂದು ಬರೆದುಕೊಂಡಿದ್ದಾರೆ.
-
ಕೊನೆಯ ಗರ್ಭಧಾರಣೆಯ ದಿನಗಳು: “ನನ್ನ ಜೀವನದ ಗರ್ಭಧಾರಣೆಯ ಹಂತ ಇಲ್ಲಿಗೆ ಕೊನೆಗೊಳ್ಳುತ್ತದೆ. ಆದ್ದರಿಂದ ಈ ಕೊನೆಯ ಕ್ಷಣದ ಪ್ರತಿಯೊಂದು ಸಣ್ಣ ಅನುಭವವನ್ನೂ ಸಂತೋಷದಿಂದ ಆಸ್ವಾದಿಸಲು ಬಯಸಿದ್ದೆ. ಹೆರಿಗೆ ನೋವು ನಿರಂತರವಾಗಿ ಇರುವುದಿಲ್ಲ, ಅದು ಅಲೆಗಳಂತೆ ಬಂದು ಹೋಗುತ್ತದೆ” ಎಂದು ತಿಳಿಸಿದ್ದಾರೆ.
ಈ ಹಿಂದೆ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರಿಂದ ತಮಗೆ ನೋವು ತಡೆಯುವ ಶಕ್ತಿ (Pain Tolerance) ಹೆಚ್ಚಿದೆ ಎಂದಿರುವ ಮೈರಾ, ಪ್ರತಿಯೊಬ್ಬರ ಹೆರಿಗೆಯ ಪಯಣವೂ ವಿಭಿನ್ನವಾಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರ
ಮೈರಾ ಅವರ ಈ ವೀಡಿಯೋಗೆ ನೆಟ್ಟಿಗರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಮೂಡ್ ಸರಿ ಮಾಡಲು ಲಿಪ್ಸ್ಟಿಕ್ ಹಚ್ಚುವುದು ಅತ್ಯುತ್ತಮ ಉಪಾಯ”, “ನಿಮಗೆ ಸಂತೋಷ ನೀಡುವ ಕೆಲಸವನ್ನು ಮಾಡಿ”, “ನನಗೂ ಸಕ್ರಿಯ ಹೆರಿಗೆ ನೋವು ಇರುವಾಗ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದೆ” ಎಂದು ಹಲವು ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡು ಮೈರಾ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

