ಬೆಂಗಳೂರು: -ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ಬೆನ್ನಲ್ಲೇ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ನಂದಿನಿ ತುಪ್ಪ, ಬೆಣ್ಣೆ, ಪನೀರ್ ಹಾಗೂ ತೃಪ್ತಿ ಉತ್ಪನ್ನಗಳ ದರಗಳನ್ನು ಪರಿಷ್ಕರಿಸಿದೆ. ಪರಿಷ್ಕೃತ ದರಗಳು ನವೆಂಬರ್ 4, 2026ರಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಮುಂದುವರಿಯಲಿವೆ.
ಬಮೂಲ್ ಮಾರುಕಟ್ಟೆ ವಿಭಾಗದ ಆದೇಶದಂತೆ ವಿವಿಧ ಗಾತ್ರದ ಪ್ಯಾಕ್‌ಗಳ ಗರಿಷ್ಠ ಚಿಲ್ಲರೆ ದರವನ್ನು ಪರಿಷ್ಕರಿಸಲಾಗಿದೆ. ಇದರಿಂದ ನಂದಿನಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಬೆಲೆ ಭಾರ ಬೀಳಲಿದೆ.
ತುಪ್ಪದ ದರದಲ್ಲಿ ಏರಿಕೆ
ನಂದಿನಿ ತುಪ್ಪದ ಸ್ಯಾಚೆಟ್ ವಿಭಾಗದಲ್ಲಿ 200 ಮಿ.ಲೀ. ಪ್ಯಾಕ್‌ಗೆ ₹95, 500 ಮಿ.ಲೀ.ಗೆ ₹425 ಹಾಗೂ ಒಂದು ಲೀಟರ್‌ಗೆ ₹850 ಗರಿಷ್ಠ ಚಿಲ್ಲರೆ ದರ ನಿಗದಿಪಡಿಸಲಾಗಿದೆ.
ಪ್ಲಾಸ್ಟಿಕ್ ಜಾರ್‌ನ 50 ಮಿ.ಲೀ. ತುಪ್ಪಕ್ಕೆ ₹65, 100 ಮಿ.ಲೀ.ಗೆ ₹100, 200 ಮಿ.ಲೀ.ಗೆ ₹180, 500 ಮಿ.ಲೀ.ಗೆ ₹435 ಹಾಗೂ ಒಂದು ಲೀಟರ್‌ಗೆ ₹870 ದರ ನಿಗದಿಯಾಗಿದೆ. 5 ಲೀಟರ್ ಪ್ಯಾಕ್‌ನ ಗರಿಷ್ಠ ಚಿಲ್ಲರೆ ಬೆಲೆ ₹4,250 ಆಗಿದೆ.
ತುಪ್ಪದ ಡಬ್ಬ ವಿಭಾಗದಲ್ಲಿ ಒಂದು ಲೀಟರ್‌ಗೆ ₹870 ಹಾಗೂ 15 ಕೆ.ಜಿ. ಪ್ಯಾಕ್‌ಗೆ ₹14,100 ದರ ನಿಗದಿಪಡಿಸಲಾಗಿದೆ.
ಬೆಣ್ಣೆಗೂ ಪರಿಷ್ಕೃತ ದರ
ಉಪ್ಪುಸಹಿತ ಬೆಣ್ಣೆಯ 10 ಗ್ರಾಂ ಪ್ಯಾಕ್‌ಗೆ ₹90, 100 ಗ್ರಾಂಗೆ ₹90 ಹಾಗೂ 500 ಗ್ರಾಂ ಪ್ಯಾಕ್‌ಗೆ ₹380 ದರ ನಿಗದಿಯಾಗಿದೆ. ಉಪ್ಪಿಲ್ಲದ ಬೆಣ್ಣೆಯ 200 ಗ್ರಾಂ ಪ್ಯಾಕ್‌ಗೆ ₹360 ಮತ್ತು 500 ಗ್ರಾಂ ಪ್ಯಾಕ್‌ಗೆ ₹390 ದರ ನಿಗದಿಪಡಿಸಲಾಗಿದೆ.
ಪನೀರ್, ತೃಪ್ತಿ ಉತ್ಪನ್ನಗಳ ಬೆಲೆಯೂ ಬದಲಾವಣೆ
ನಂದಿನಿ ಪನೀರ್‌ನ 200 ಗ್ರಾಂ ಪ್ಯಾಕ್‌ಗೆ ₹115 ಹಾಗೂ 500 ಗ್ರಾಂ ಪ್ಯಾಕ್‌ಗೆ ₹260 ಗರಿಷ್ಠ ಚಿಲ್ಲರೆ ದರ ನಿಗದಿಯಾಗಿದೆ. ಮಧ್ಯಮ ಕೊಬ್ಬಿನಾಂಶವಿರುವ ಪನೀರ್‌ನ 200 ಗ್ರಾಂ ಪ್ಯಾಕ್‌ಗೆ ₹110 ಹಾಗೂ 500 ಗ್ರಾಂ ಪ್ಯಾಕ್‌ಗೆ ₹485 ದರ ನಿಗದಿಯಾಗಿದೆ.
ತೃಪ್ತಿ ಬಾಕ್ಸ್ ಉತ್ಪನ್ನದ 135 ಮಿ.ಲೀ. ಪ್ಯಾಕ್‌ಗೆ ₹11 ಹಾಗೂ 450 ಮಿ.ಲೀ. ಪ್ಯಾಕ್‌ಗೆ ₹33 ದರ ನಿಗದಿಪಡಿಸಲಾಗಿದೆ.
ಮುಂದಿನ ಆದೇಶದವರೆಗೆ ಜಾರಿ
ಹೊಸ ದರಗಳಂತೆ ಉತ್ಪನ್ನಗಳ ಮಾರಾಟ ನಡೆಸುವಂತೆ ಬಮೂಲ್ ತನ್ನ ರೀಟೇಲರ್‌ಗಳು, ಫ್ರಾಂಚೈಸಿಗಳು, ಟಿಸಿಡಿ, ಡೇ ಕೌಂಟರ್, ವಾಕ್‌ಇನ್ ಕೋಲ್ಡ್ ಹಾಗೂ ಪಾರ್ಲರ್ ನಿರ್ವಾಹಕರಿಗೆ ಸೂಚಿಸಿದೆ.
ಈಗಾಗಲೇ ಹಾಲು ಮತ್ತು ಮೊಸರು ಸೇರಿದಂತೆ ನಂದಿನಿ ಉತ್ಪನ್ನಗಳ ಬೆಲೆ ಪರಿಷ್ಕರಣೆಯಿಂದ ಗ್ರಾಹಕರ ಖರ್ಚು ಹೆಚ್ಚಾಗಿರುವ ಸಂದರ್ಭದಲ್ಲಿ, ತುಪ್ಪ, ಬೆಣ್ಣೆ ಮತ್ತು ಪನೀರ್ ದರಗಳಲ್ಲಿನ ಬದಲಾವಣೆಯೂ ಕುಟುಂಬಗಳ ಮಾಸಿಕ ಆಹಾರ ವೆಚ್ಚದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.

