ಬೆಂಗಳೂರು-ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿರುವುದನ್ನು ಭಿಕ್ಷೆಗೆ ಹೋಲಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಯನ್ನು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ತೀವ್ರವಾಗಿ ಖಂಡಿಸಿದ್ದಾರೆ.
ಬರ ಪರಿಹಾರ ಕೇಳುವುದು ಕರ್ನಾಟಕದ ಭಿಕ್ಷೆಯಲ್ಲ, ಅದು ರಾಜ್ಯದ ಸಾಂವಿಧಾನಿಕ ಹಾಗೂ ನ್ಯಾಯಸಮ್ಮತ ಹಕ್ಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಕೇಂದ್ರ ಸರ್ಕಾರ ಯಜಮಾನನೂ ಅಲ್ಲ, ರಾಜ್ಯಗಳು ಅದರ ಮುಂದೆ ಕೈಚಾಚಿ ನಿಲ್ಲುವ ಜೀತದಾಳುಗಳೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಜನರಿಂದ ಚುನಾಯಿತವಾದ ರಾಜ್ಯ ಸರ್ಕಾರ ತನ್ನ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರದಿಂದ ಪರಿಹಾರ ಕೇಳುವುದು ಸಂವಿಧಾನಬದ್ಧ ಹಕ್ಕು. ಅದನ್ನು ಭಿಕ್ಷೆಗೆ ಹೋಲಿಸಿರುವುದು ಆರ್. ಅಶೋಕ್ ಅವರಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅರಿವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಕರ್ನಾಟಕದ ರೈತರು ಭಿಕ್ಷುಕರಲ್ಲ, ದೇಶಕ್ಕೆ ಅನ್ನ ನೀಡುವ ಅನ್ನದಾತರು. ದೇಶದ ಅಭಿವೃದ್ಧಿಗೆ ಕರ್ನಾಟಕದ ತೆರಿಗೆ ಹಣ ಬೇಕು ಎನ್ನುವ ಕೇಂದ್ರ ಸರ್ಕಾರ, ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ನೆರವು ನೀಡುವ ವಿಚಾರದಲ್ಲೂ ಜವಾಬ್ದಾರಿ ವಹಿಸಬೇಕು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಹಣಕಾಸು ಆಯೋಗದ ಶಿಫಾರಸುಗಳ ಆಧಾರದಲ್ಲಿ ರೂಪುಗೊಂಡ ವ್ಯವಸ್ಥೆಗಳಾಗಿದ್ದು, ಅವುಗಳಡಿ ನೆರವು ಕೇಳುವುದು ಕೇಂದ್ರದ ಔದಾರ್ಯವಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಕೂಲಿ ಕೆಲಸ ಅರಸಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆಯೂ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ವಿರೋಧ ಪಕ್ಷದ ನಾಯಕರು ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ..
ತೆರಿಗೆ ಕೊಡುಗೆಗೆ ತಕ್ಕ ಪಾಲು ಸಿಗುತ್ತಿಲ್ಲ
ಕರ್ನಾಟಕವು ವಿವಿಧ ತೆರಿಗೆ, ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳ ಮೂಲಕ ವಾರ್ಷಿಕವಾಗಿ ಸುಮಾರು ₹5 ಲಕ್ಷ ಕೋಟಿ ಕೇಂದ್ರಕ್ಕೆ ನೀಡುತ್ತಿದೆ. ಆದರೆ ಪ್ರತಿ ರೂಪಾಯಿ ತೆರಿಗೆ ಕೊಡುಗೆಗೆ ಪ್ರತಿಯಾಗಿ ತೆರಿಗೆ ಹಂಚಿಕೆ ಹಾಗೂ ಅನುದಾನಗಳ ರೂಪದಲ್ಲಿ ಕೇವಲ 13 ಪೈಸೆ ಮಾತ್ರ ಮರಳಿ ಬರುತ್ತಿದೆ ಎಂಬುದು ರಾಜ್ಯದ ವಾದವಾಗಿದೆ ಎಂದು ತಿಳಿಸಿದ್ದಾರೆ.
14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಶೇ.4.713ರಷ್ಟಿದ್ದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಕುಸಿದಿತ್ತು. 16ನೇ ಹಣಕಾಸು ಆಯೋಗವು ಶೇ.4.131ಕ್ಕೆ ಹೆಚ್ಚಿಸಿದ್ದರೂ ಹಿಂದಿನ ಮಟ್ಟ ತಲುಪಿಲ್ಲ. ಕೇಂದ್ರದ ಹಣಕಾಸು ನೀತಿಗಳಿಂದ ರಾಜ್ಯಕ್ಕೆ ₹2.5 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂಬುದು ರಾಜ್ಯ ಸರ್ಕಾರದ ಆರೋಪವಾಗಿದೆ ಎಂದು ವಿವರಿಸಿದ್ದಾರೆ.
22,400 ಕೋಟಿ ಪರಿಹಾರದ ಅಗತ್ಯ
ರಾಜ್ಯದ 226 ಬರಪೀಡಿತ ತಾಲ್ಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಅಕ್ಟೋಬರ್ 26ರ ಪರಿಷ್ಕೃತ SDRF ಮತ್ತು NDRF ಮಾನದಂಡಗಳ ಪ್ರಕಾರ ಇನ್‌ಪುಟ್ ಸಬ್ಸಿಡಿ ಅಗತ್ಯ ₹7,943.55 ಕೋಟಿಗೆ ಏರಿದ್ದು, ಒಟ್ಟು ಪರಿಹಾರದ ಅಗತ್ಯ ₹22,400.58 ಕೋಟಿಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ನೆರವಿಗೆ ಕಾಯದೆ
ರಾಜ್ಯ ಸರ್ಕಾರ ಮೊದಲ ಕಂತಿನ ಮಧ್ಯಂತರ ಪರಿಹಾರವಾಗಿ ₹1,250 ಕೋಟಿ ಘೋಷಿಸಿದೆ. ಅರ್ಹ ರೈತರಿಗೆ ತಲಾ ₹2,500 ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಕುಡಿಯುವ ನೀರಿಗಾಗಿ ₹306 ಕೋಟಿ, ತುರ್ತು ಕ್ರಮಗಳಿಗಾಗಿ ಜಿಲ್ಲಾಧಿಕಾರಿಗಳ ಬಳಿ ₹329 ಕೋಟಿ ಹಾಗೂ ಮೇವು ನಿರ್ವಹಣೆಗೆ ₹25 ಕೋಟಿ ಒದಗಿಸಲಾಗಿದೆ. ಆದರೆ ಈ ಮೊತ್ತದಿಂದ ರೈತರ ಸಂಪೂರ್ಣ ಬೆಳೆ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರದಿಂದ ಪೂರ್ಣ ಪ್ರಮಾಣದ ನೆರವು ಕೋರಲಾಗಿದೆ ಎಂದು ಹೇಳಿದ್ದಾರೆ.
ಅಶೋಕ್ ಅವರ ನಿಲುವು ಬದಲಾಗಿದೆಯೇ?
ಅಕ್ಟೋಬರ್ 7ರಂದು ಆರ್. ಅಶೋಕ್ ಅವರೇ ಕೇಂದ್ರ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಅವರು ಪರಿಹಾರ ಕೇಳಿದರೆ ರೈತರ ಪರ ಹೋರಾಟವಾಗುತ್ತದೆ. ಆದರೆ ಚುನಾಯಿತ ರಾಜ್ಯ ಸರ್ಕಾರ ಅದೇ ಬೇಡಿಕೆ ಮುಂದಿಟ್ಟರೆ ಭಿಕ್ಷೆಯಾಗುತ್ತದೆಯೇ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.
2023–24ರ ಬರಗಾಲದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಪರಿಹಾರ ಕೋರಿದ್ದರು. ಕೇಂದ್ರ ಗೃಹ ಮತ್ತು ಕೃಷಿ ಸಚಿವರಿಗೂ ಹಲವು ಬಾರಿ ಪತ್ರ ಬರೆಯಲಾಗಿತ್ತು.
ಆದರೂ ಸಕಾಲದಲ್ಲಿ ನೆರವು ದೊರೆಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ರಾಜ್ಯವು ಸುಮಾರು ₹18,174 ಕೋಟಿ ಪರಿಹಾರ ಕೋರಿದ್ದರೂ, ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ₹3,454.22 ಕೋಟಿ ಬಿಡುಗಡೆಯಾಗಿತ್ತು ಎಂದು ಹಿಂದಿನ ಘಟನೆಯನ್ನು ಉಲ್ಲೇಖಿಸಿದ್ದಾರೆ.
ಕೃಷಿ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಪತ್ತು ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಬೇಕು. ವೈಜ್ಞಾನಿಕ ಜಲ ನಿರ್ವಹಣೆ, ಹವಾಮಾನ ವೈಪರೀತ್ಯ ಎದುರಿಸುವ ಕೃಷಿ ಪದ್ಧತಿ, ಪರಿಣಾಮಕಾರಿ ಬೆಳೆ ವಿಮೆ ಹಾಗೂ FRUITS ವ್ಯವಸ್ಥೆಯ ಮೂಲಕ ರೈತರಿಗೆ ಪರಿಹಾರ ವಿತರಣೆ ಬಲಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರು ಪಕ್ಷ ರಾಜಕಾರಣ ಬದಿಗಿಟ್ಟು ರೈತರ ಪರ ನಿಲ್ಲಬೇಕು. ₹2,500 ಪರಿಹಾರ ಸಾಕಾಗುವುದಿಲ್ಲವೆಂದು ಭಾವಿಸಿದರೆ ಹೆಚ್ಚಿನ ನೆರವಿಗಾಗಿ ರಾಜ್ಯ ಸರ್ಕಾರದೊಂದಿಗೆ ಧ್ವನಿಗೂಡಿಸಲಿ ಎಂದು ಕರೆ ನೀಡಿದ್ದಾರೆ.
ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷವಲ್ಲ, ರೈತರ ಹಿತಾಸಕ್ತಿಯ ಪ್ರಶ್ನೆಯಾಗಿದೆ. ಕರ್ನಾಟಕ ಭಿಕ್ಷೆ ಬೇಡುತ್ತಿಲ್ಲ, ತನ್ನ ನ್ಯಾಯಯುತ ಹಕ್ಕನ್ನು ಪ್ರತಿಪಾದಿಸುತ್ತಿದೆ. ಮಳೆ ಕೈಕೊಟ್ಟರೂ ರಾಜ್ಯ ಸರ್ಕಾರ ರೈತರ ಕೈಬಿಡುವುದಿಲ್ಲ ಎಂದು ಡಾ.ಜಿ. ಪರಮೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

