ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಮೋಷನಲ್ ರೀಲ್ ಒಂದನ್ನು ಹಂಚಿಕೊಂಡಿದ್ದ ನಟಿ ಜಿಯಾ ಶಂಕರ್, ತಮ್ಮ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂಬ ವದಂತಿಗಳಿಗೆ ಕಾರಣರಾಗಿದ್ದರು. ಜಿಯಾ ತಮ್ಮ ಭಾವಿ ಪತಿ ಕರಣ್ ಧನಕ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದವು. ಆದರೆ ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಅವರು ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತೆರೆಎಳೆದಿದ್ದಾರೆ.
ರಿಯಲ್ ಲೈಫ್ ಬಾಲಿವುಡ್ ಸಿನಿಮಾವಲ್ಲ ಕರಣ್ ಧನಕ್ ಜೊತೆಗಿನ ಆಕರ್ಷಕ ಫೋಟೋಗಳನ್ನು ಹಂಚಿಕೊಂಡ ಜಿಯಾ, “ಒಟ್ಟಿಗೆ ಜೀವನ ನಡೆಸುವುದು ಎಷ್ಟು ಕಷ್ಟ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಇದು ಯಾವುದೇ ಬಾಲಿವುಡ್ ಸಿನಿಮಾವಲ್ಲ,” ಎಂದು ದೀರ್ಘ ಬರವಣಿಗೆ ಬರೆದುಕೊಂಡಿದ್ದಾರೆ. ಪ್ರತಿಯೊಂದು ಜೋಡಿಯಂತೆ ತಮ್ಮಲ್ಲೂ ಕೆಲವೊಂದು ಭಿನ್ನಾಭಿಪ್ರಾಯಗಳಿವೆ ಮತ್ತು ಜಗಳಗಳು ನಡೆಯುತ್ತವೆ, ಆದರೆ ತಾವು ಒಬ್ಬರಿಗೊಬ್ಬರು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಬಗ್ಗೆ ಮುನ್ನೆಚ್ಚರಿಕೆ ತಮ್ಮ ಭಾವಿ ಪತಿ ಹಾಗೂ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿರುವ ನಟಿ, “ಇನ್ಮುಂದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವಾಗ ಹೆಚ್ಚು ಎಚ್ಚರಿಕೆಯಿಂದ ಇರುತ್ತೇನೆ. ಇದರಿಂದ ಅನಗತ್ಯ ಊಹಾಪೋಹಗಳಿಗೆ ಜಾಗವಿರುವುದಿಲ್ಲ,” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಆಗಸ್ಟ್ನಲ್ಲಿ ಆಗಿತ್ತು ನಿಶ್ಚಿತಾರ್ಥ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಜಿಯಾ ಶಂಕರ್ ಹಾಗೂ ಕರಣ್ ಧನಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಭಿಮಾನಿಗಳು ಈ ಜೋಡಿಯ ಮದುವೆ ಸುದ್ದಿಗಾಗಿ ಕಾಯುತ್ತಿದ್ದು, ಪ್ರಸ್ತುತ ಜಿಯಾ ಅವರ ಈ ಸ್ಪಷ್ಟನೆಯಿಂದ ಅಭಿಮಾನಿಗಳು ನಿರಾಳರಾಗಿದ್ದಾರೆ.

