ಶಿಡ್ಲಘಟ್ಟ: ನಗರಸಭೆಯಿಂದ ಇ-ಖಾತೆ ಮಾಡಿಸಿಕೊಡಲು ಅರ್ಜಿದಾರರೊಬ್ಬರಿಂದ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿಡ್ಲಘಟ್ಟ ನಗರಸಭೆಯ ನಾಗರಾಜ ಬಂಧಿತ ಸಿಬ್ಬಂದಿ.
ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ನಗರಸಭೆಯ ಕಚೇರಿಯಲ್ಲಿ ನಾಗರಾಜ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಶೇಖರ್ ಮತ್ತು ಶಿವರಾಜಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ₹25,500 ಹಣದೊಂದಿಗೆ ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಬಳಿಕ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ.
ಇ-ಖಾತೆ ವಿತರಣೆಯಂತಹ ಸಾರ್ವಜನಿಕ ಸೇವೆ ಒದಗಿಸಲು ಲಂಚದ ಬೇಡಿಕೆ ಇಟ್ಟಿರುವ ಆರೋಪದ ಕುರಿತು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
https://x.com/ANI/status/2117311391149568430?s=20
ಅಧಿಕಾರಿಗಳೇ ಎಚ್ಚರ: ಕರ್ತವ್ಯ ಲೋಪ ಕಂಡರೆ ಲೋಕಾಯುಕ್ತ ಕೇಸ್
ಇನ್ನೊಂದೆಡೆ, ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ಲೋಪ, ಭ್ರಷ್ಟಾಚಾರ, ಸರ್ಕಾರಿ ಅನುದಾನದ ದುರ್ಬಳಕೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಳಗಾವಿ ನಗರದ ರಾಮತೀರ್ಥ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ತಹಶೀಲ್ದಾರ್ ಕಚೇರಿ, ಕುಮಾರಸ್ವಾಮಿ ಬಡಾವಣೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮ ಪಂಚಾಯಿತಿ ಹಾಗೂ ಶಿವಾಜಿ ನಗರದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಗಳಿಗೆ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಚೇರಿಗಳ ಆಡಳಿತಾತ್ಮಕ ಕಾರ್ಯವೈಖರಿ, ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ವಸತಿ ಶಾಲೆಗಳಲ್ಲಿ ಸೌಲಭ್ಯಗಳ ಪರಿಶೀಲನೆ
ರಾಮತೀರ್ಥ ನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಹಾಸಿಗೆ, ಹೊದಿಕೆ, ಕಟ್ಟಡಗಳ ನಿರ್ವಹಣೆ, ಸ್ವಚ್ಛತೆ, ಶೌಚಾಲಯ, ಅಡುಗೆ ಕೋಣೆ ಹಾಗೂ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದರು. ದಿನಸಿ ಸಾಮಗ್ರಿಗಳ ಸಂಗ್ರಹಣೆಯ ಬಗ್ಗೆಯೂ ಮಾಹಿತಿ ಪಡೆದರು.
ವಿದ್ಯಾರ್ಥಿಗಳಿಗೆ ನಿಗದಿತ ಮೆನುವಿನ ಪ್ರಕಾರ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಸ್ವತಃ ಅಲ್ಪಾಹಾರ ಸೇವಿಸಿ ಗುಣಮಟ್ಟವನ್ನು ಪರೀಕ್ಷಿಸಿದರು.
ಅಡುಗೆ ಸಿಬ್ಬಂದಿಗೆ ಮಾಸಿಕ ವೇತನವನ್ನು ಸಕಾಲದಲ್ಲಿ ಪಾವತಿಸಬೇಕು. ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿ ಲೋಕಾಯುಕ್ತ ದೂರು ಸಲ್ಲಿಕೆ ಮತ್ತು ಸಂಪರ್ಕದ ವಿವರಗಳನ್ನು ಒಳಗೊಂಡ ಮಾಹಿತಿ ಫಲಕ ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಭಯದ ವಾತಾವರಣ ನಿರ್ಮಿಸದೆ ಸ್ನೇಹಪರ ವಾತಾವರಣ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಕಂದಾಯ ಸೇವೆಯಲ್ಲಿ ವಿಳಂಬಕ್ಕೆ ಅವಕಾಶವಿಲ್ಲ
ಬೆಳಗಾವಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಹಾನಿಯ ಪ್ರಮಾಣದ ಆಧಾರದ ಮೇಲೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿರುವ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಇಲಾಖೆಯ ಎಲ್ಲ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ತಲುಪಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಅಧಿಕಾರಿಗಳು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

