ಫ್ಲೋರಿಡಾ: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಸಂಭವಿಸಿದ ಭೀಕರ ಖಾಸಗಿ ವಿಮಾನ ದುರಂತದಲ್ಲಿ ಖ್ಯಾತ ಟೆಕ್ ಉದ್ಯಮಿ, ಅವರ ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಮಕ್ಕಳ ಆರೈಕೆದಾರರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.
ಬಹಾಮಾಸ್‌ಗೆ ತೆರಳುತ್ತಿದ್ದ ಲಿಯರ್‌ಜೆಟ್ 60 (Learjet 60) ವಿಮಾನವು ಹಾರಾಟದ ವೇಳೆ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ಈ ದುರಂತ ಇಡೀ ಅಮೆರಿಕದಲ್ಲಿ ಆಘಾತ ಮೂಡಿಸಿದೆ.
2026ರ ನವೆಂಬರ್ 1ರಂದು ಭಾನುವಾರ ಈ ಘಟನೆ ನಡೆದಿದ್ದು, ನವೆಂಬರ್ 2ರಂದು ಮೃತರ ಗುರುತುಗಳನ್ನು ಕುಟುಂಬದವರು ಹಾಗೂ ಮಾಧ್ಯಮಗಳು ಬಹಿರಂಗಪಡಿಸಿವೆ. ವಿಮಾನದಲ್ಲಿದ್ದ ಎಲ್ಲ ಒಂಬತ್ತು ಮಂದಿಯೂ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟೆಕ್ ಉದ್ಯಮಿ ಆಡಂ ರಾಬಿನ್ಸನ್ ಕುಟುಂಬವೇ ದುರಂತಕ್ಕೆ ಬಲಿ
ಮೃತಪಟ್ಟವರಲ್ಲಿ ಟೆಕ್ಸಾಸ್ ಮೂಲದ 44 ವರ್ಷದ ತಂತ್ರಜ್ಞಾನ ಉದ್ಯಮಿ ಆಡಂ ರಾಬಿನ್ಸನ್(Adam Robinson), ಅವರ ಪತ್ನಿ ಹೆಲೆನ್ ಶಾರ್ಪ್(Helen Sharp) ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳು ಸೇರಿದ್ದಾರೆ.
ಮಕ್ಕಳಾದ ಎಮ್ಮಾಗೆ ನಾಲ್ಕು ವರ್ಷ ಮತ್ತು ಚಾರ್ಲಿಗೆ ಎರಡು ವರ್ಷ ವಯಸ್ಸಾಗಿತ್ತು. ಕುಟುಂಬದೊಂದಿಗೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆರೈಕೆದಾರ್ತಿ ಅನಿತಾ ಮರಿಯಾ ಸೆಟಿನಾ ಕೂಡ ಮೃತಪಟ್ಟಿದ್ದಾರೆ.
ಇವರ ಜೊತೆಗೆ ಕುಟುಂಬದ ಆಪ್ತ ಸ್ನೇಹಿತರಾದ ರಾಚೆಲ್ ರೀಡ್ ಮತ್ತು ಚಾರ್ಮಿ ಫೆಹರ್ ಕೂಡ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಆಡಂ ರಾಬಿನ್ಸನ್ ಅವರು Retention.com ಮತ್ತು RB2B ಸೇರಿದಂತೆ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಬಹಾಮಾಸ್ ಪ್ರವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
20 ವರ್ಷದ ಯುವ ಸಹಪೈಲಟ್ ಸೇರಿದಂತೆ ಇಬ್ಬರು ಪೈಲಟ್ ಗಳೂ ಸಾವು
ಈ ವಿಮಾನವನ್ನು 55 ವರ್ಷದ ಪೈಲಟ್ ಜೆಫ್ ಗ್ರೆಗೊರಿ (Jeff Gregory) ಮತ್ತು 20 ವರ್ಷದ ಸಹಪೈಲಟ್ ನಥಾಲಿಯಾ ಫಿಲ್ಗ್ವೇರಾಸ್ (Nathalia Filgueiras) ನಿರ್ವಹಿಸುತ್ತಿದ್ದರು. ದುರಂತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.
ವಿಶೇಷವೆಂದರೆ, ನಥಾಲಿಯಾ ಅವರಿಗೆ ಕೇವಲ 17 ವರ್ಷ ವಯಸ್ಸಿದ್ದಾಗಲೇ ಪೈಲಟ್ ಪರವಾನಗಿ ದೊರೆತಿತ್ತು. ಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ವಿಮಾನಯಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ವಿಮಾನ ಹಾರಾಟದ ತರಬೇತಿ ಪಡೆದಿದ್ದರು. ಅವರ ಸಾವಿನಿಂದ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಟೆಕ್ಸಾಸ್ ನಿಂದ ಬಹಾಮಾಸ್ ಗೆ ಹೊರಟಿದ್ದ ವಿಮಾನ
ದುರಂತಕ್ಕೀಡಾದ Learjet 60 ವಿಮಾನವು ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್‌ನಿಂದ ಬಹಾಮಾಸ್‌ನ ನಾರ್ತ್ ಎಲುಥೆರಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು.
ನವೆಂಬರ್ 1ರಂದು ಬೆಳಿಗ್ಗೆ ಸುಮಾರು 10.37ಕ್ಕೆ ಆಸ್ಟಿನ್ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ಫ್ಲೋರಿಡಾ ಪ್ರದೇಶವನ್ನು ತಲುಪಿದಾಗ ಹವಾಮಾನ ವೈಪರೀತ್ಯ ಎದುರಿಸಿತು. ವಿಮಾನವು ಪಾಮ್ ಬೀಚ್ ಕೌಂಟಿ ಪ್ರದೇಶದ ಬಳಿ ಹಾರಾಟ ನಡೆಸುತ್ತಿದ್ದಾಗ ಭೀಕರ ದುರಂತ ಸಂಭವಿಸಿದೆ.
ವಿಮಾನವು ಜನವಸತಿ ಪ್ರದೇಶದ ಸಮೀಪದಲ್ಲಿರುವ ಮೊಬೈಲ್ ಹೋಮ್ ಪಾರ್ಕ್ ಪ್ರವೇಶದ ರಸ್ತೆಯ ಬಳಿ ಪತನಗೊಂಡಿದೆ. ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಸಂಪೂರ್ಣವಾಗಿ ನಾಶವಾಗಿದೆ.
ಹವಾಮಾನ ವೈಪರೀತ್ಯವೇ ದುರಂತಕ್ಕೆ ಕಾರಣವೇ?
ಪ್ರಾಥಮಿಕ ತನಿಖೆಯ ಪ್ರಕಾರ ವಿಮಾನವು ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರೀ ಗುಡುಗು ಸಹಿತ ಮಳೆ, ಗಾಳಿಯ ಪ್ರಕ್ಷುಬ್ಧತೆ ಮತ್ತು ಅತಿಯಾದ ಚಳಿಯ ವಾತಾವರಣ ಎದುರಿಸಿತ್ತು. ಸುಮಾರು 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಸುತ್ತ ಮಂಜುಗಡ್ಡೆ ರೂಪುಗೊಳ್ಳಲು ಆರಂಭವಾಗಿತ್ತು. ಇದರಿಂದ ವಿಮಾನದ ರೆಕ್ಕೆಗಳ ಮೇಲೆ ಮಂಜುಗಡ್ಡೆ ಸಂಗ್ರಹವಾಗುವ ಸಾಧ್ಯತೆ ಇತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಪೈಲಟ್ ಗಳು ಹವಾಮಾನ ಸಮಸ್ಯೆ ಎದುರಾಗಿರುವ ಬಗ್ಗೆ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ವಿಮಾನವನ್ನು ಸುಮಾರು 35 ಸಾವಿರ ಅಡಿಯಿಂದ 37 ಸಾವಿರ ಅಡಿ ಎತ್ತರಕ್ಕೆ ಕೊಂಡೊಯ್ಯಲು ಅನುಮತಿಯನ್ನೂ ಕೇಳಿದ್ದರು.
ಆದರೆ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ವಿಮಾನವು ತೀವ್ರ ವೇಗದಲ್ಲಿ ಕೆಳಮುಖವಾಗಿ ಇಳಿಯಲು ಆರಂಭಿಸಿದ್ದು, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಪೈಲಟ್‌ಗಳು ವಿಮಾನ ನಿಯಂತ್ರಣಕ್ಕೆ ಸಂಬಂಧಿಸಿದ ತೊಂದರೆಯನ್ನು ತಿಳಿಸಿ ಅಪಾಯದ ಸಂದೇಶ ರವಾನಿಸಿದ್ದರು.
ವಾಯು ಸಂಚಾರ ನಿಯಂತ್ರಣಕ್ಕೆ ಲಭ್ಯವಾದ ರೇಡಿಯೋ ಸಂಭಾಷಣೆಯಲ್ಲಿ ವಿಮಾನವು ನಿಮಿಷಕ್ಕೆ ಸುಮಾರು 20 ಸಾವಿರ ಅಡಿ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿರುವುದಾಗಿ ಪೈಲಟ್ ಮಾಹಿತಿ ನೀಡಿರುವುದು ವರದಿಯಾಗಿದೆ.
ಅಪಘಾತದ ತನಿಖೆ ಆರಂಭಿಸಿದ NTSB
ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ವಿಮಾನ ದುರಂತದ ಕುರಿತು ತನಿಖೆ ಆರಂಭಿಸಿದೆ. ವಿಮಾನವು ಹವಾಮಾನ ವೈಪರೀತ್ಯದಿಂದ ನಿಯಂತ್ರಣ ಕಳೆದುಕೊಂಡಿತೇ ಅಥವಾ ತಾಂತ್ರಿಕ ದೋಷವೂ ಕಾರಣವಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕುಟುಂಬದವರಿಂದ ಭಾವನಾತ್ಮಕ ಸಂದೇಶ
ಈ ಭೀಕರ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆಡಂ ರಾಬಿನ್ಸನ್ ಮತ್ತು ಹೆಲೆನ್ ಶಾರ್ಪ್ ತಮ್ಮ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆದರ್ಶ ದಂಪತಿಗಳಾಗಿದ್ದರು. ಎಮ್ಮಾ ಮತ್ತು ಚಾರ್ಲಿ ಅವರ ಬದುಕಿನ ಸಂತೋಷವಾಗಿದ್ದರು ಎಂದು ಕುಟುಂಬದವರು ಭಾವುಕರಾಗಿ ಸ್ಮರಿಸಿದ್ದಾರೆ.
ಅವರ ಕುಟುಂಬ ಸ್ನೇಹಿತರಾದ ರಾಚೆಲ್ ರೀಡ್ ಮತ್ತು ಚಾರ್ಮಿ ಫೆಹರ್ ಅವರ ಸ್ನೇಹ, ಪ್ರೀತಿ ಹಾಗೂ ಜೀವನೋತ್ಸಾಹವನ್ನು ಕುಟುಂಬದವರು ನೆನಪಿಸಿಕೊಂಡಿದ್ದಾರೆ. ಮಕ್ಕಳ ಆರೈಕೆ ಮಾಡುತ್ತಿದ್ದ ಅನಿತಾ ಮರಿಯಾ ಸೆಟಿನಾ ಕೂಡ ಕುಟುಂಬದ ಅವಿಭಾಜ್ಯ ಸದಸ್ಯರಂತಿದ್ದರು ಎಂದು ಸಂತಾಪ ಸೂಚಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಖಾಸಗಿತನ ಕಾಪಾಡುವಂತೆ ಸಾರ್ವಜನಿಕರಲ್ಲಿ ಮೃತರ ಕುಟುಂಬಗಳು ಮನವಿ ಮಾಡಿಕೊಂಡಿವೆ.

