ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ಉತ್ತಮ ಉದ್ಯೋಗ ಹೊಂದಿರುವ ಮಹಿಳೆ ತನ್ನ ಜೀವನ ನಿರ್ವಹಣೆಗೆ ಸಾಕಷ್ಟು ಆದಾಯ ಗಳಿಸುತ್ತಿದ್ದರೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪತ್ನಿಗೆ ಪ್ರತಿ ತಿಂಗಳು ₹20,000 ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅಕ್ಟೋಬರ್ 30ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಾಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ, ಉತ್ತಮ ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಜೀವನಾಂಶದ ಬೇಡಿಕೆಯನ್ನು ನಿರ್ಧರಿಸುವಾಗ ಪ್ರಮುಖ ಅಂಶಗಳಾಗಿವೆ ಎಂದು ಅಭಿಪ್ರಾಯಪಟ್ಟಿದೆ.ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಗ ಮಾತ್ರ ಜೀವನಾಂಶದ ಅಗತ್ಯವನ್ನು ಪರಿಗಣಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿವಾಹಿತ ಮಹಿಳೆಯನ್ನು ಎಲ್ಲ ಸಂದರ್ಭಗಳಲ್ಲೂ ಪತಿಯೇ ಪೋಷಿಸಬೇಕು ಎಂದು ಕಾನೂನು ಹೇಳುವುದಿಲ್ಲ. ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಉತ್ತಮ ಹುದ್ದೆಯಲ್ಲಿದ್ದು, ತನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಗಳಿಸುತ್ತಿದ್ದರೆ ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯವು 2025ರ ಜುಲೈ 4ರಂದು ಪತ್ನಿಗೆ ಪ್ರತಿ ತಿಂಗಳು ₹20,000 ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪತಿಯ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಪತ್ನಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ. ಪದವಿ ಪಡೆದಿದ್ದು, ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಆಕೆಯ ವಾರ್ಷಿಕ ವೇತನ ₹10 ಲಕ್ಷವಾಗಿದ್ದು, ಪ್ರತಿ ತಿಂಗಳು ಸುಮಾರು ₹54,700 ಆದಾಯ ಗಳಿಸುತ್ತಿದ್ದಾರೆ ಎಂದು ತಿಳಿಸಿದ್ದರು.
ಹೀಗಾಗಿ ಪತ್ನಿ ತನ್ನ ಜೀವನ ನಿರ್ವಹಣೆಯನ್ನು ಸ್ವತಃ ಮಾಡಿಕೊಳ್ಳುವ ಆರ್ಥಿಕ ಸಾಮರ್ಥ್ಯ ಹೊಂದಿದ್ದಾರೆ ಎಂದು ವಾದಿಸಿದ್ದರು.
ಪತಿ ನ್ಯಾಯಾಲಯದಲ್ಲಿ ಹೇಳಿದ್ದೇನು?
ಪತಿಯು ತೀವ್ರ ಮಧುಮೇಹದಿಂದ ಬಳಲುತ್ತಿದ್ದು, ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ಇಂಜೆಕ್ಷನ್ ಪಡೆಯಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ತಾನು ತಿಂಗಳಿಗೆ ಸುಮಾರು ₹2 ಲಕ್ಷ ಆದಾಯ ಗಳಿಸುತ್ತಿದ್ದರೂ, ತನ್ನ ವೈದ್ಯಕೀಯ ಚಿಕಿತ್ಸೆ ಹಾಗೂ ವೃದ್ಧ ಪೋಷಕರ ಆರೋಗ್ಯ ಮತ್ತು ನಿರ್ವಹಣೆಗಾಗಿ ಪ್ರತಿ ತಿಂಗಳು ಸುಮಾರು ₹70,000 ಖರ್ಚು ಮಾಡಬೇಕಾಗಿದೆ ಎಂದು ಹೇಳಿದ್ದರು.
ಇದಲ್ಲದೆ, ಪತ್ನಿ ತನ್ನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿರುವುದರಿಂದ ಕಾನೂನು ಹೋರಾಟಕ್ಕೂ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ ಎಂದು ವಾದಿಸಿದ್ದರು.
ಪತ್ನಿಯೇ ಸಲ್ಲಿಸಿರುವ ಮಾಹಿತಿಯ ಪ್ರಕಾರ ಆಕೆ ತಿಂಗಳಿಗೆ ₹54,700 ಗಳಿಸುತ್ತಿದ್ದು, ಒಬ್ಬ ವ್ಯಕ್ತಿ ಗೌರವಯುತವಾಗಿ ಜೀವನ ನಡೆಸಲು ಈ ಆದಾಯ ಸಾಕು ಎಂದು ಪತಿಯ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇದಕ್ಕೆ ಪ್ರತಿಯಾಗಿ, ಮದುವೆಗೂ ಮುನ್ನ ಪತಿ ತಮ್ಮ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟಿದ್ದರು. ಮದುವೆಯ ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡುವುದರ ಜೊತೆಗೆ ಹಿಂಸೆ ಮತ್ತು ಕೆಟ್ಟ ನಡವಳಿಕೆಯಿಂದ ತೊಂದರೆ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು.
ಆದರೆ, ಕೌಟುಂಬಿಕ ನ್ಯಾಯಾಲಯವು ಪತ್ನಿ ಉದ್ಯೋಗದಲ್ಲಿದ್ದರೂ ಪತಿಯ ಆದಾಯ ಹೆಚ್ಚಿರುವುದರಿಂದ ಆಕೆಗೆ ಆರ್ಥಿಕ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟು ಮಾಸಿಕ ₹20,000 ಜೀವನಾಂಶ ಪಾವತಿಸಲು ಆದೇಶಿಸಿತ್ತು.
ಹೈಕೋರ್ಟ್ ಹೇಳಿದ್ದೇನು?
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 144 ಅನ್ನು ಉಲ್ಲೇಖಿಸಿದ ಕರ್ನಾಟಕ ಹೈಕೋರ್ಟ್, ಜೀವನಾಂಶ ಕೋರುವ ವ್ಯಕ್ತಿಯು ಕೆಲವು ಪ್ರಮುಖ ಅಂಶಗಳನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ತಿಳಿಸಿದೆ.
ಎದುರುಪಕ್ಷವು ಜೀವನ ನಿರ್ವಹಣೆಗೆ ಅಗತ್ಯವಾದ ನೆರವು ನೀಡಲು ನಿರ್ಲಕ್ಷ್ಯ ಮಾಡಿರಬೇಕು ಅಥವಾ ನಿರಾಕರಿಸಿರಬೇಕು.
ಜೀವನಾಂಶ ಕೋರುವ ವ್ಯಕ್ತಿಗೆ ಸ್ವತಃ ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇರಬೇಕು.
ಈ ಎರಡೂ ಅಂಶಗಳು ಸಾಬೀತಾದ ನಂತರವಷ್ಟೇ ಪತಿಯ ಆರ್ಥಿಕ ಸಾಮರ್ಥ್ಯ ಮತ್ತು ಪತ್ನಿಯನ್ನು ಪೋಷಿಸುವ ಆತನ ಸಾಮರ್ಥ್ಯದ ವಿಚಾರವನ್ನು ಪರಿಗಣಿಸಬಹುದು ಎಂದು ನ್ಯಾಯಪೀಠ ವಿವರಿಸಿದೆ.
ಪೋಷಕರನ್ನು ನೋಡಿಕೊಳ್ಳುತ್ತಿರುವ ಪತ್ನಿಯ ಆದಾಯವೂ ಪರಿಗಣನೆಗೆ
ವಿಚಾರಣೆ ವೇಳೆ ಪತ್ನಿಯು ತನ್ನ ಪೋಷಕರು ತನ್ನನ್ನೇ ಅವಲಂಬಿಸಿದ್ದು, ಅವರ ನಿರ್ವಹಣೆಗಾಗಿ ಪ್ರತಿ ತಿಂಗಳು ಸುಮಾರು ₹35,000 ಖರ್ಚು ಮಾಡುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ಅಂಶವನ್ನು ಗಮನಿಸಿದ ನ್ಯಾಯಪೀಠ, ತನ್ನ ಆದಾಯದಿಂದ ಪೋಷಕರನ್ನು ನೋಡಿಕೊಳ್ಳುತ್ತಿರುವ ಮಹಿಳೆ ಪತಿಯ ಮೇಲೆ ಅವಲಂಬಿತಳಾಗಿದ್ದಾಳೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
“ತನ್ನ ಆದಾಯದಿಂದ ಪೋಷಕರನ್ನು ನಿರ್ವಹಿಸುತ್ತಿರುವುದಾಗಿ ಸ್ವತಃ ಪತ್ನಿಯೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಪತ್ನಿಗೆ ಜೀವನಾಂಶ ಪಾವತಿಸುವ ಹೊಣೆಗಾರಿಕೆಯನ್ನು ಪತಿಯ ಮೇಲೆ ಹೊರಿಸಿರುವ ಪ್ರಶ್ನಿತ ಆದೇಶವನ್ನು ರದ್ದುಗೊಳಿಸಬೇಕಾಗಿದೆ” ಎಂದು ಹೈಕೋರ್ಟ್ ತಿಳಿಸಿದೆ.
ಅಂತಿಮವಾಗಿ, ಪತ್ನಿಯ ಆರ್ಥಿಕ ಸ್ವಾವಲಂಬನೆ ಮತ್ತು ಆದಾಯದ ವಿವರಗಳನ್ನು ಪರಿಗಣಿಸಿದ ನ್ಯಾಯಾಲಯ, ಆಕೆಗೆ ಮಾಸಿಕ ₹20,000 ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

