ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು, ಕೊನೆಯ ಎರಡು ಪಂದ್ಯಗಳಲ್ಲಿ ಸೋಲುಕಂಡ ಬಳಿಕ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ನಾಲ್ಕು ವರ್ಷಗಳ ಬಳಿಕ ಭಾರತೀಯ ತಂಡಕ್ಕೆ ಕಂಬ್ಯಾಕ್ ಮಾಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಸರಣಿಗೆ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರವನ್ನು 2007ರ ಟಿ20 ವಿಶ್ವಕಪ್ ವಿಜೇತ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾನ್ ತೀವ್ರವಾಗಿ ಪ್ರಶ್ನಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಇರ್ಫಾನ್ ಪಠಾನ್, “ನನ್ನ ಪ್ರಕಾರ ಸೆಲೆಕ್ಟರ್ಗಳು ಎಲ್ಲಿ ತಪ್ಪು ಮಾಡಿದರು? ಭುವನೇಶ್ವರ್ ಕುಮಾರ್ ಅವರನ್ನು ಈ ಸರಣಿಯಲ್ಲಿ ಆಡಿಸಿರುವುದು ದೊಡ್ಡ ತಪ್ಪು. ಭುವನೇಶ್ವರ್ ಒಬ್ಬ ಉತ್ತಮ ಬೌಲರ್ ಹಾಗೂ ಹಿರಿಯ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಟಿ20 ವಿಶ್ವಕಪ್ ದೂರವಿರುವಾಗ ಅವರನ್ನು ಈ ಸರಣಿಗೆ ಆಯ್ಕೆ ಮಾಡಿದ್ದು ಪ್ರಶ್ನಾರ್ಹವಾಗಿದೆ. ಒಂದು ವೇಳೆ ನೀವು ಅವರನ್ನು ಮುಂಬರುವ ಏಕದಿನ ವಿಶ್ವಕಪ್ಗಾಗಿ ಸಿದ್ಧಪಡಿಸುತ್ತಿದ್ದರೆ ಅದು ಅರ್ಥಪೂರ್ಣವಾಗುತ್ತಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಹಿರಿಯ ಆಟಗಾರನಿಗೆ ಅವಕಾಶ ನೀಡುವ ಬದಲು ಯುವ ವೇಗಿಗಳಿಗೆ ಅವಕಾಶ ನೀಡಬೇಕಿತ್ತು ಎಂದಿದ್ದಾರೆ. “ಭುವನೇಶ್ವರ್ ಬದಲು ಯುವ ಬೌಲರ್ಗಳಿಗೆ ನ್ಯೂಜಿಲ್ಯಾಂಡ್ ನೆಲದಲ್ಲಿ ಅವಕಾಶ ಸಿಗಬೇಕಿತ್ತು. ಮಾಯಾಂಕ್ ಯಾದವ್ ಅಥವಾ ಪ್ರಿನ್ಸ್ ಯಾದವ್ ಎಲ್ಲಾ ಪಂದ್ಯಗಳನ್ನಾಡಿ ಮೌಲ್ಯಯುತ ಅನುಭವ ಪಡೆದುಕೊಳ್ಳಬಹುದಿತ್ತು. ಆದರೆ ಸೆಲೆಕ್ಟರ್ಗಳ ಈ ತೀರ್ಮಾನದಿಂದ ಯುವ ವೇಗಿಗಳಿಗೆ ಸಿಗಬೇಕಿದ್ದ ಸುವರ್ಣ ಅವಕಾಶ ತಪ್ಪಿಹೋಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭುವನೇಶ್ವರ್ ಕುಮಾರ್ ಅವರ ಪ್ರತಿಭೆ ಅಥವಾ ಕೌಶಲ್ಯದ ಬಗ್ಗೆ ತಮಗೆ ಯಾವುದೇ ಅನುಮಾನವಿಲ್ಲ ಎಂದಿರುವ ಪಠಾನ್, ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಕಾರಣಕ್ಕೆ ತಾವಿದನ್ನು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಭವಿಷ್ಯದ ದೃಷ್ಟಿಯಿಂದ 36 ವರ್ಷದ ವೇಗಿಯ ಬದಲಿಗೆ ಯುವ ಬೌಲರ್ಗಳನ್ನು ಬೆಳೆಸುವುದು ಬಿಸಿಸಿಐ ಹಾಗೂ ಸೆಲೆಕ್ಟರ್ಗಳ ಜವಾಬ್ದಾರಿಯಾಗಿದೆ ಎಂದು ಇರ್ಫಾನ್ ಪಠಾನ್ ಎಚ್ಚರಿಸಿದ್ದಾರೆ.

