ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆದಾರರಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಸೌಲಭ್ಯ ಒದಗಿಸಲು ಮುಂದಾಗಿದೆ. ಇನ್ಮುಂದೆ ಪಿಎಫ್ ಖಾತೆಯ ಬ್ಯಾಲೆನ್ಸ್ ಎಷ್ಟು ಇದೆ, ಪಾಸ್‌ಬುಕ್ ವಿವರಗಳು, ಖಾತೆಗೆ ಜಮೆಯಾಗಿರುವ ಹಣ ಹಾಗೂ ಹಣ ಹಿಂಪಡೆದಿರುವ ವಹಿವಾಟಿನ ಮಾಹಿತಿಯನ್ನು WhatsApp ಮೂಲಕವೇ ಪಡೆಯಬಹುದು. ಇದರಿಂದ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯ ಮಾಹಿತಿ ತಿಳಿದುಕೊಳ್ಳಲು ಪದೇಪದೇ ಇಪಿಎಫ್‌ಒ ಕಚೇರಿಗೆ ಭೇಟಿ ನೀಡುವ ಅಥವಾ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವ ಅಗತ್ಯ ಕಡಿಮೆಯಾಗಲಿದೆ.
ಈ ಸೇವೆಗಳಿಗೆ ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಭಾನುವಾರ ಚಾಲನೆ ನೀಡಿದ್ದಾರೆ.
ಖಾಸಗಿ ಕಂಪನಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಉದ್ಯೋಗಿಗಳಿಗೆ ಈ ಸೌಲಭ್ಯ ಅನುಕೂಲವಾಗುವ ನಿರೀಕ್ಷೆಯಿದೆ. ಡಿಜಿಟಲ್ ಸೇವೆಗಳನ್ನು ಸರಳಗೊಳಿಸುವ ಉದ್ದೇಶದಿಂದ ಇಪಿಎಫ್‌ಒ ಈ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.
ಇನ್ಮುಂದೆ WhatsAppನಲ್ಲೇ PF ಬ್ಯಾಲೆನ್ಸ್ ಚೆಕ್ ಮಾಡಬಹುದು. ಪಾಸ್‌ಬುಕ್, ಹಣ ಜಮೆ ಮತ್ತು ವಿತ್ ಡ್ರಾ ವಿವರಗಳೂ ಲಭ್ಯವಿರುತ್ತವೆ.
WhatsApp ಸೇವೆಯಲ್ಲಿ ಯಾವೆಲ್ಲ ಮಾಹಿತಿ ಸಿಗಲಿದೆ?
* PF ಬ್ಯಾಲೆನ್ಸ್: ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ ಪ್ರಸ್ತುತ ಎಷ್ಟು ಹಣವಿದೆ ಎಂಬುದನ್ನು ತಿಳಿಯಬಹುದು.
* ಕೊನೆಯ ಐದು ವಹಿವಾಟುಗಳು: ಇತ್ತೀಚೆಗೆ ಖಾತೆಗೆ ಜಮೆಯಾದ ಹಣ ಹಾಗೂ ನಡೆದ ವಹಿವಾಟುಗಳ ವಿವರ ಪಡೆಯಬಹುದು.
* PF ಪಾಸ್‌ಬುಕ್: ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆ ಸೇರಿದಂತೆ ಪಾಸ್‌ಬುಕ್ ಮಾಹಿತಿ ವೀಕ್ಷಿಸಬಹುದು.
* PMVBRY ಯೋಜನೆ: ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಗೆ ಸಂಬಂಧಿಸಿದ ಅರ್ಹತೆ ಮತ್ತು ಅಗತ್ಯ ಪ್ರಕ್ರಿಯೆಗಳ ಕುರಿತು ವೈಯಕ್ತಿಕ ಮಾರ್ಗದರ್ಶನ ಪಡೆಯಬಹುದು.
₹1,000 ಒಳಗಿನ ನಿಷ್ಕ್ರಿಯ PF ಖಾತೆಗಳಿಗೆ ಮತ್ತೊಂದು ಸಿಹಿಸುದ್ದಿ
ಇದೇ ಸಂದರ್ಭದಲ್ಲಿ ಇಪಿಎಫ್‌ಒ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದೀರ್ಘಕಾಲದಿಂದ ಬಳಕೆಯಲ್ಲಿಲ್ಲದ ಹಾಗೂ ₹1,000 ಅಥವಾ ಅದಕ್ಕಿಂತ ಕಡಿಮೆ ಹಣ ಹೊಂದಿರುವ ಅರ್ಹ PF ಖಾತೆಗಳಲ್ಲಿನ ಮೊತ್ತವನ್ನು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಈ ಹಿಂದೆ ಇಂತಹ ಖಾತೆಗಳಲ್ಲಿ ಹಣ ಪಡೆಯಲು ಸಂಬಂಧಪಟ್ಟ ಸದಸ್ಯರು ಪ್ರತ್ಯೇಕವಾಗಿ ಕ್ಲೇಮ್ ಸಲ್ಲಿಸಬೇಕಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಆಧಾರ್ ದೃಢೀಕರಣಗೊಂಡಿರುವ ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿದಂತೆ ಸದಸ್ಯರು ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಗುರುತು ಮತ್ತು ಬ್ಯಾಂಕ್ ಖಾತೆಯ ಅಗತ್ಯ ಪರಿಶೀಲನೆ ಪೂರ್ಣಗೊಂಡ ಬಳಿಕ ಇಪಿಎಫ್‌ಒ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ.
ಈ ಯೋಜನೆಯಿಂದ ಸುಮಾರು ಒಂದು ಲಕ್ಷ ಖಾತೆಗಳಿಗೆ ಸೇರಿದ ಒಟ್ಟು ₹5 ಕೋಟಿ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ನಿರೀಕ್ಷೆಯಿದೆ.
8 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ಅನುಕೂಲ
ನವೆಂಬರ್ 1ರಂದು ಇಪಿಎಫ್‌ಒನ 74ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರು WhatsApp ಸೇವೆ ಸೇರಿದಂತೆ ಈ ಸುಧಾರಣೆಗಳನ್ನು ಉದ್ಘಾಟಿಸಿದ್ದಾರೆ.
ಇಪಿಎಫ್‌ಒ ದೇಶದ 8 ಕೋಟಿಗೂ ಹೆಚ್ಚು ಸಕ್ರಿಯ ಸದಸ್ಯರಿಗೆ ಸೇವೆ ಒದಗಿಸುತ್ತಿದ್ದು, ಸುಮಾರು ₹32 ಲಕ್ಷ ಕೋಟಿ ಮೊತ್ತದ ಭವಿಷ್ಯ ನಿಧಿ ಸಂಗ್ರಹವನ್ನು ನಿರ್ವಹಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಪಿಎಫ್ ಖಾತೆಯಲ್ಲಿರುವ ಹಣ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಇನ್ನು ಮುಂದೆ ವೆಬ್‌ಸೈಟ್ ಗಳಿಗೆ ಹೋಗಿ ಲಾಗಿನ್ ಆಗುವ ತೊಂದರೆ ಕಡಿಮೆಯಾಗಲಿದೆ. ಮೊಬೈಲ್‌ನಲ್ಲೇ WhatsApp ಮೂಲಕ ಅಗತ್ಯ ಮಾಹಿತಿ ಪಡೆಯುವ ಅವಕಾಶ ಉದ್ಯೋಗಿಗಳಿಗೆ ಸಿಗಲಿದೆ ಎಂದು ಹೇಳಲಾಗಿದೆ.

