ಬೆಂಗಳೂರು: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೆ ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಯತ್ನಾಳ್ ಭೇಟಿ ಹಾಗೂ ಸಮಾಲೋಚನೆಗಳು ಮತ್ತಷ್ಟು ಪುಷ್ಠಿ ನೀಡಿವೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನಿರಂತರವಾಗಿ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ತಾರ ಎಂಬ ಚರ್ಚೆ ಕೂಡ ಆರಂಭವಾಗಿದೆ. ಯತ್ನಾಳ್ ಬಿಜೆಪಿಗೆ ವಾಪಸ್ ಆಗುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಈಗ ಪ್ರತಿಕ್ರಿಯೆ ನೀಡಿದ್ದಾರೆ.
ಯತ್ನಾಳ್ ಅವರು ಬಿಜೆಪಿಗೆ ಬರಲು ಎರಡು ಷರತ್ತನ್ನು ಹಾಕಿದ್ದಾರೆ. ಅವರ ಕಂಡೀಷನ್’ಗೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಅವರ ಮೊದಲ ಷರತ್ತು ವಿಜಯೇಂದ್ರ ಅವರು ರಾಜ್ಯದ ಅಧ್ಯಕ್ಷ ಸ್ಥಾನದಿಂದ ಇಳಿಯಬೇಕು. ಇನ್ನೊಂದು, ಹತ್ತು ವರ್ಷಗಳ ಕಾಲ ಅವರು ಮುಖ್ಯಮಂತ್ರಿ ಆಗಲ್ಲ ಎಂದು ಬರೆದುಕೊಡಬೇಕೆಂದು ಹೇಳಿದ್ದಾರೆ. ಅವರ ಷರತ್ತಿಗೆ ನನ್ನದೇನೂ ತಕರಾರು ಇಲ್ಲ. ನನಗೆ ನನ್ನಲ್ಲೇ ಆತ್ಮವಿಶ್ವಾಸವಿದೆ, ರಾಜ್ಯದ ಸಮಸ್ತ ಕಾರ್ಯಕರ್ತರಿಗೆ ಸಂದೇಶವನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇವತ್ತು ನಾವು ನೋಡಬೇಕಾಗಿರುವುದು ದೇಶದ ಮತ್ತು ರಾಜ್ಯದ ಹಿತದೃಷ್ಟಿಯಿಂದ, ನಾವೆಲ್ಲರೂ ಒಟ್ಟಾಗಿ ಒಂದಾಗಿ ಹೋಗಬೇಕಿದೆ. ವಿಜಯೇಂದ್ರ ಕೂಡ ನೀವೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಸಂದೇಶವನ್ನು ಕೊಟ್ಟಿದ್ದಾರೆ. ಹಾಗಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಷರತ್ತಿಗೆ ಒಪ್ಪಿದ್ದೇನೆ. ಮತ್ತು, ಡೇ ಒನ್’ನಿಂದ ಹಾಗೆಯೇ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಮುಖಾಮುಖಿ ಮತ್ತು ಮಾತುಕತೆಯಾದ ಬಳಿಕ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ನಡುವೆಯೂ ಚರ್ಚೆ ನಡೆದಿತ್ತು. ಇದಾದ ಬಳಿಕ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ, ಯತ್ನಾಳ್, ದೆಹಲಿಯಲ್ಲಿ ಬಿಜೆಪಿ ನಾಯಕರು, ಸಚಿವರನ್ನು ಭೇಟಿಯಾಗಿದ್ದರು. ಮೊದಲು, ಸಚಿವ ವಿ.ಸೋಮಣ್ಣನವರ ನಿವಾಸದಲ್ಲಿ ಮಾತುಕತೆ ನಡೆದಿತ್ತು.
ಇದಾದ ನಂತರ, ಸಂಸದ ಪಿಸಿ ಮೋಹನ್ ಅವರ ದೆಹಲಿ ನಿವಾಸದಲ್ಲಿ ಭೋಜನಕೂಟ ಮೀಟಿಂಗ್ ನಡೆದಿತ್ತು. ಇನ್ನೊಂದೆಡೆ ಈಶ್ವರಪ್ಪನವರೂ, ಬಿಜೆಪಿಗೆ ಮರಳುವ ಮಾತನ್ನಾಡುತ್ತಿದ್ದಾರೆ. ಹಾಗಾಗಿ ಯತ್ನಾಳ್ ಹಾಗೂ ಈಶ್ವರಪ್ಪ ಇಬರೂ ಬಿಜೆಪಿಗೆ ಮರು ಸೇರ್ಪಡೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ದಟ್ಟವಾಗಿದೆ.

