ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್ ಜಗತ್ತಿನ ತಾರೆಗಳ ನಡುವೆ ಪ್ರೇಮಾಂಕುರವಾಗುವುದು ಹೊಸದೇನಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟಾಗೋರ್ ಅವರಿಂದ ಹಿಡಿದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿಯವರೆಗೆ ಈ ಸಮ್ಮಿಲನ ಮುಂದುವರಿಯುತ್ತಲೇ ಬಂದಿದೆ. ಆದರೆ, ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ನೆಟ್ವರ್ಕ್ ಸಾಮ್ರಾಜ್ಯದ ಒಡತಿ ಕಾವ್ಯಾ ಮಾರನ್ ಅವರ ಮುಂಬರುವ ವಿವಾಹವು ಭಾರತೀಯ ಎಂಟರ್ಟೈನ್ಮೆಂಟ್ ಹಾಗೂ ಕಾರ್ಪೊರೇಟ್ ವಲಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ.
ಸಿನಿಮಾ ಹಾಗೂ ಕ್ರಿಕೆಟ್, ಸಂಗೀತ ಹಾಗೂ ಉದ್ಯಮ ರಂಗದ ಎರಡು ಶಕ್ತಿಶಾಲಿ ಧ್ರುವಗಳು ಒಂದಾಗುತ್ತಿದ್ದು, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಜೋಡಿ ಭಾರತದ ಮುಂದಿನ ಅತ್ಯಂತ ಪ್ರಭಾವಶಾಲಿ ‘ಯಂಗ್ ಪವರ್ ಕಪಲ್’ ಆಗಿ ಹೊರಹೊಮ್ಮುತ್ತಿದೆ. ನವೆಂಬರ್ 11 ರಂದು ಗ್ರೀಸ್ ದೇಶದ ರಮಣೀಯ ತಾಣದಲ್ಲಿ ಈ ಜೋಡಿಯ ಅದ್ಧೂರಿ ಕಲ್ಯಾಣ ನೆರವೇರಲಿದೆ.
ಪ್ರೇಮಾಂಕುರವಾಗಿದ್ದು ಹೇಗೆ? ಚೆನ್ನೈ ಮೂಲದವರಾದ ಈ ಇಬ್ಬರೂ ಒಂದೇ ಸಾಮಾಜಿಕ ಬಳಗದಲ್ಲಿದ್ದು ಪರಿಚಿತರಾಗಿದ್ದರು. ಅನಿರುದ್ಧ್ ಸನ್ ಪಿಕ್ಚರ್ಸ್ ಸಂಸ್ಥೆಯ ಹಲವು ದೊಡ್ಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಜೊತೆಗೆ ಚೆನ್ನೈ ಐಪಿಎಲ್ ಪಂದ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ರಿಕೆಟ್ ಪ್ರೇಮಿಯಾಗಿದ್ದಾರೆ. ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹ-ಒಡತಿಯಾಗಿರುವ ಕಾವ್ಯಾ ಮಾರನ್ ಕೂಡ ಕ್ರಿಕೆಟ್ ಎಂದರೆ ಪಂಚಪ್ರಾಣ ಎನ್ನುವವರು. ಹೀಗಾಗಿ ಸಿನಿಮಾ ಮತ್ತು ಕ್ರಿಕೆಟ್ ಮೇಲಿನ ಈ ಜಂಟಿ ಪ್ರೀತಿಯೇ ಇವರಿಬ್ಬರನ್ನು ಹತ್ತಿರವಾಗಿಸಿದೆ.
ಸಂಗೀತ ಸಾಮ್ರಾಟ ಅನಿರುದ್ಧ್ ರವಿಚಂದರ್: 2012ರಲ್ಲಿ ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಕಂಟ್ರಿ ವೈರಲ್ ಆದ ಅನಿರುದ್ಧ್, ಇಂದು ರಜನಿಕಾಂತ್, ಶಾರುಖ್ ಖಾನ್, ವಿಜಯ್ ಹಾಗೂ ಪವನ್ ಕಲ್ಯಾಣ್ ಅವರಂತಹ ದಿಗ್ಗಜ ನಟರ ಸಿನಿಮಾಗಳಿಗೆ ಸಂಗೀತ ನೀಡುತ್ತಿರುವ ಪಾನ್-ಇಂಡಿಯಾ ಸಂಗೀತ ನಿರ್ದೇಶಕರಾಗಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ ಆಂಥೆಮ್ ಸಂಯೋಜಿಸಿರುವ ಇವರು, ಆಲ್ಬುಕರ್ಕ್ ರೆಕಾರ್ಡ್ಸ್ ಲೇಬಲ್ ಹಾಗೂ ಲೋಕಾ ಲೋಕಾ ಟಕಿಲಾ ಬ್ರಾಂಡ್ ಮೂಲಕ ಯಶಸ್ವಿ ಉದ್ಯಮಿಯಾಗಿಯೂ ಬೆಳೆದಿದ್ದಾರೆ.
ಕ್ರಿಕೆಟ್ ಕ್ಷೇತ್ರದ ಶಕ್ತಿಶಾಲಿ ಮಹಿಳೆ ಕಾವ್ಯಾ ಮಾರನ್: ಸನ್ ಟಿವಿ ನೆಟ್ವರ್ಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಕಾವ್ಯಾ ಮಾರನ್, ಕೇವಲ ಕಲಾನಿಧಿ ಮಾರನ್ ಅವರ ಮಗಳಾಗಿ ಗುರುತಿಸಿಕೊಳ್ಳದೆ ತಮ್ಮದೇ ಆದ ಯಶಸ್ವಿ ಗುರುತು ನಿರ್ಮಿಸಿಕೊಂಡಿದ್ದಾರೆ. ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ಜೊತೆಗೆ ದಕ್ಷಿಣ ಆಫ್ರಿಕಾದ ಎಸ್ಎ20 ಲೀಗ್ನ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಹಾಗೂ ಇಂಗ್ಲೆಂಡ್ನ ‘ದಿ ಹಂಡ್ರೆಡ್’ ಲೀಗ್ನ ಸನ್ರೈಸರ್ಸ್ ಲೀಡ್ಸ್ ತಂಡಗಳ ಮಾಲೀಕತ್ವ ಹೊಂದುವ ಮೂಲಕ ಜಾಗತಿಕ ಕ್ರಿಕೆಟ್ ಕ್ಷೇತ್ರದಲ್ಲಿ ಶಕ್ತಿಶಾಲಿ ಮಹಿಳಾ ಉದ್ಯಮಿಯಾಗಿ ಬೆಳೆದಿದ್ದಾರೆ.

