‘ಜಾನ್ನಿ ತೇರಾ ನಾ’ ಹಾಗೂ ‘ಪಾಗಲ್ ನಹಿ ಹೋನಾ’ ಮುಂತಾದ ಸೂಪರ್ ಹಿಟ್ ಹಾಡುಗಳ ಮೂಲಕ ಪ್ರಸಿದ್ದಿ ಪಡೆದಿರುವ ಪಂಜಾಬಿ ಗಾಯಕಿ ಸುನಂದಾ ಶರ್ಮಾ ಅವರಿಗೆ ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಹಿ ಅನುಭವ ಎದುರಾಗಿದೆ. ಜೈಪುರದ ಆನಂದ್ ಇಂಟರ್ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಏರ್ಪಡಿಸಲಾಗಿದ್ದ ಸಂಗೀತ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ವೇದಿಕೆಯಲ್ಲಿ ಸುನಂದಾ ಶರ್ಮಾ ಅವರು ಗಾಯನ ನಡೆಸಿಕೊಡುತ್ತಿದ್ದಾಗ, ಬೆಳ್ಳಿಯ ಬಣ್ಣದ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬ ದಿಢೀರನೆ ಭದ್ರತೆಯನ್ನು ಮೀರಿ ವೇದಿಕೆಗೆ ಜಿಗಿದಿದ್ದಾನೆ. ಇದರಿಂದ ದಿಗ್ಭ್ರಮೆಗೊಂಡ ಗಾಯಕಿ ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ. ಆ ಕ್ಷಣದಲ್ಲಿ ಗಾಯಕಿ “ಇಟ್ಸ್ ಓಕೆ, ಇಟ್ಸ್ ಓಕೆ” ಎಂದು ಸಿಬ್ಬಂದಿಗೆ ಹೇಳಿದರೂ, ಆತಂಕದಿಂದಾಗಿ ಪ್ರದರ್ಶನವನ್ನು ಮಧ್ಯದಲ್ಲೇ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಸುನಂದಾ ಶರ್ಮಾ ಅವರು ತಾವು ಎದುರಿಸಿದ್ದ ಮಾನಸಿಕ ಖಿನ್ನತೆಯ ಕಠಿಣ ದಿನಗಳ ಬಗ್ಗೆಯೂ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಸುಮಾರು 2 ತಿಂಗಳು 17 ದಿನಗಳ ಕಾಲ ಕತ್ತಲೆಯ ಕೋಣೆಯಲ್ಲಿ ಯಾರೊಂದಿಗೂ ಮಾತನಾಡದೆ ಕಳೆದಿದ್ದ ಘಟನೆಯನ್ನು ಹಂಚಿಕೊಂಡಿದ್ದ ಅವರು, ಆ ಹಂತದಿಂದ ಹೊರಬಂದ ನಂತರ ಜೀವನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿಕೊಂಡಿರುವುದಾಗಿ ತಿಳಿಸಿದ್ದರು.

