ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಮೈದಾನದಿಂದ ಹೊರತಾಗಿಯೂ ದೊಡ್ಡ ಮಟ್ಟದ ಗಮನ ಸೆಳೆದಿದ್ದಾರೆ. ವಿಶ್ವಪ್ರಸಿದ್ಧ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಮತ್ತು ಭಾರತದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಕ್ಯಾರಿಮಿನಾಟಿ (ಅಜೇಯ್ ನಾಗರ್) ಅವರೊಂದಿಗೆ ಸೇರಿ ಹಾರ್ದಿಕ್ ಪಾಂಡ್ಯ ವಿಶೇಷ ಬೆಸ್ಬಾಲ್ ಚಾಲೆಂಜ್ ಒಂದರಲ್ಲಿ ಭಾಗವಹಿಸಿದ್ದರು.
ಮಿಸ್ಟರ್ ಬೀಸ್ಟ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾದ ಈ ಚಾಲೆಂಜ್ನಲ್ಲಿ ಸುಮಾರು 100,000 ಡಾಲರ್ (ಅಂದಾಜು 94.91 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಪಣಕ್ಕಿಡಲಾಗಿತ್ತು. ಈ ಪಂದ್ಯದಲ್ಲಿ ಕ್ರೀಡಾಂಗಣದಿಂದ ಹೊರಗೆ ಹೆಚ್ಚು ಬೆಸ್ಬಾಲ್ ಬಾರಿಸುವವರಿಗೆ ಗೆಲುವು ನಿಗದಿಯಾಗಿತ್ತು. ಜೀವನದಲ್ಲೇ ಎಂದೂ ಬೆಸ್ಬಾಲ್ ಆಡದ ಹಾರ್ದಿಕ್ ಪಾಂಡ್ಯ ತಮ್ಮ ನೈಜ ಹೊಡೆತದ ಸಾಮರ್ಥ್ಯದ ಮೂಲಕ ಮೈದಾನದಿಂದ ಹೊರಗೆ ಮೂರು ಬೌಂಡರಿ ದಾಟಿಸಿ ಅದ್ಭುತ ಪ್ರದರ್ಶನ ನೀಡಿದರು.
ಅಂತಿಮವಾಗಿ ಮಿಸ್ಟರ್ ಬೀಸ್ಟ್ ವಿರುದ್ಧ ಈ ಸವಾಲಿನಲ್ಲಿ ಗೆಲುವು ಸಾಧಿಸಿದ ಹಾರ್ದಿಕ್ ಪಾಂಡ್ಯ 94 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ತಮ್ಮದಾಗಿಸಿಕೊಂಡರು. ಆದರೆ, ಈ ಇಡೀ ಜಯಕ್ಕಿಂತ ಹೆಚ್ಚಾಗಿ ಅವರು ಮಾಡಿದ ಉದಾರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತಮಗೆ ಬಂದ ಸಂಪೂರ್ಣ ಬಹುಮಾನದ ಹಣವನ್ನು ಬಡ ಮಕ್ಕಳು ಹಾಗೂ ಬೀದಿ ನಾಯಿಗಳ ರಕ್ಷಣೆಗಾಗಿ ದಾನ ಮಾಡುವ ಮೂಲಕ ಹಾರ್ದಿಕ್ ಉದಾರತೆ ಮೆರೆದಿದ್ದಾರೆ.

