ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಸ್ಟಾರ್ ವೇಗಿಗಳಾದ ಜೋಶ್ ಹ್ಯಾಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಪ್ರೇಕ್ಷಕರ ವಿರುದ್ಧ ಅತಿಯಾಗಿ ವರ್ತಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಮೈದಾನದಲ್ಲಿದ್ದ ಪ್ರೇಕ್ಷಕರತ್ತ ಜೋಶ್ ಹ್ಯಾಝಲ್‌ವುಡ್ ಅಶ್ಲೀಲ ಸೈಗೆ (ಮಿಡಲ್ ಫಿಂಗರ್) ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಹ್ಯಾಝಲ್‌ವುಡ್ ಅಶ್ಲೀಲ ಸೈಗೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಪ್ರಕಾರ, ಹ್ಯಾಝಲ್‌ವುಡ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಕಡೆಗೆ ತಮ್ಮ ಮದ್ಯದ ಬೆರಳನ್ನು ತೋರಿಸಿ ಅಶ್ಲೀಲ ಸೈಗೆ ಮಾಡಿದ್ದಾರೆ. ಪ್ರೇಕ್ಷಕರು ಮತ್ತು ಹ್ಯಾಝಲ್‌ವುಡ್ ನಡುವೆ ಯಾವ ವಿಷಯಕ್ಕೆ ಜಗಳ ಅಥವಾ ಕಿರಿಕಿರಿ ಉಂಟಾಯಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಆಸೀಸ್ ವೇಗಿಯ ಈ ಅನುಚಿತ ವರ್ತನೆ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹ್ಯಾಝಲ್‌ವುಡ್ ಅಷ್ಟೇ ಅಲ್ಲದೆ, ಮತ್ತೊಬ್ಬ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಪ್ರೇಕ್ಷಕರ ಮೇಲೆ ತೀವ್ರವಾಗಿ ಕೋಪಗೊಂಡಿರುವ ಮತ್ತೊಂದು ವೀಡಿಯೋ ಹರಿದಾಡುತ್ತಿದೆ. ಗ್ಯಾಲರಿಯತ್ತ ಬೆರಳು ಮಾಡಿ ನಿಂದಿಸುವಂತೆ ಮಾತನಾಡಿದ ಸ್ಟಾರ್ಕ್ ಅವರ ಹಾವಭಾವಗಳು ಆಸ್ಟ್ರೇಲಿಯಾ ಆಟಗಾರರ ಶಿಸ್ತಿನ ಮೇಲೆಯೇ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.
ಆಟಗಾರರು ಮತ್ತು ಪ್ರೇಕ್ಷಕರ ನಡುವೆ ನಡೆದ ಈ ಗಂಭೀರ ಕಿರಿಕಿರಿಯ ನಿಖರ ಕಾರಣಗಳು ತಿಳಿದುಬಂದಿಲ್ಲವಾದರೂ, ತಮ್ಮ ಬೌಲಿಂಗ್ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ಇಂತಹ ಅನಗತ್ಯ ವಿವಾದಗಳಿಂದಾಗಿ ಆಸ್ಟ್ರೇಲಿಯಾದ ಬೌಲಿಂಗ್ ಜೋಡಿ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

