ಹಾಂಗ್ ಕಾಂಗ್ ಇಂಟರ್ನ್ಯಾಷನಲ್ ಸಿಕ್ಸಸ್ 2026 ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಮುಖಭಂಗವಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅನುಭವಿಸಿದ ಸೋಲಿನ ಬೆನ್ನಲ್ಲೇ, ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧವೂ ಭಾರತ ಹೀನಾಯವಾಗಿ ಶರಣಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿ ಭಾರತ ನೀಡಿದ್ದ 95 ರನ್ಗಳ ಗುರಿಯನ್ನು ಯುಎಇ ತಂಡ ಒಂದೂ ವಿಕೆಟ್ ನಷ್ಟವಿಲ್ಲದೆ ಕೇವಲ 4.2 ಓವರ್ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿದೆ.
ಬ್ಯಾಟಿಂಗ್ ವೈಫಲ್ಯ, ಬೌಲರ್ಗಳಿಗೆ ಚಾಟಿಯೇಟು: ನಿಗದಿತ 6 ಓವರ್ಗಳ ಪಂದ್ಯದಲ್ಲಿ ಭಾರತೀಯ ತಂಡ 94 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆದರೆ ಈ ಸಾಧಾರಣ ಮೊತ್ತವನ್ನು ಕಾಯ್ದುಕೊಳ್ಳುವಲ್ಲಿ ಭಾರತದ ಬೌಲರ್ಗಳು ಸಂಪೂರ್ಣವಾಗಿ ವಿಫಲರಾದರು. ಪಂದ್ಯದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಯುಎಇ ಆರಂಭಿಕ ಆಟಗಾರರು, ಭಾರತೀಯ ಬೌಲರ್ಗಳನ್ನು ಕಟುವಾಗಿ ದಂಡಿಸಿದರು.
ವಿಕೆಟ್ ನಷ್ಟವಿಲ್ಲದೆ ಯುಎಇ ಭರ್ಜರಿ ಗೆಲುವು: 95 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಯುಎಇ, ಕೇವಲ 26 ಎಸೆತಗಳಲ್ಲಿ (4.2 ಓವರ್ಗಳಲ್ಲಿ) 97 ರನ್ ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಯಾವುದೇ ವಿಕೆಟ್ ಕಳೆದುಕೊಳ್ಳದೆ ಅಸಾಧಾರಣ ರೀತಿಯಲ್ಲಿ ಪಂದ್ಯ ಮುಗಿಸಿದ ಯುಎಇ, ಭಾರತದ ವಿರುದ್ಧ ಐತಿಹಾಸಿಕ ಜಯ ದಾಖಲಿಸಿತು.
ಸತತ ಎರಡು ಸೋಲಿನಿಂದ ಭಾರತಕ್ಕೆ ಹಿನ್ನಡೆ: ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ನೀಡಿಡಿದ್ದ 89 ರನ್ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಗಿದ್ದ ಭಾರತ, 8 ವಿಕೆಟ್ಗಳ ಸೋಲು ಕಂಡಿತ್ತು. ಇದೀಗ ಸಾಲು ಸಾಲು ಎರಡು ಸೋಲುಗಳೊಂದಿಗೆ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತದ ಮುಂದಿನ ಹಾದಿ ತೀವ್ರ ಕಠಿಣಗೊಂಡಿದೆ.

