ಬೆಂಗಳೂರು- ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಹಾಗೂ ನ್ಯಾಯಕ್ಕಾಗಿ ದೀರ್ಘ ಹೋರಾಟ ಮುಂದುವರಿದಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (SIT) ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದೆ. ಸರ್ಕಾರದ ಆದೇಶದಂತೆ, ನೂತನ ಎಸ್ಐಟಿ ಮುಖ್ಯಸ್ಥರಾಗಿ ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಎಸ್ಐಟಿ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಐಜಿಪಿ ಶಶಿಕುಮಾರ್ ಹಾಗೂ ವೆಂಕಟೇಶ್ ಪ್ರಸನ್ನ ಅವರು ತಮ್ಮನ್ನು ಈ ಜವಾಬ್ದಾರಿಯಿಂದ ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅವರ ವೈಯಕ್ತಿಕ ಅಥವಾ ಇತರೆ ಕಾರಣಗಳ ಕೋರಿಕೆಯನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ಇಬ್ಬರನ್ನೂ ಎಸ್ಐಟಿಯಿಂದ ಮುಕ್ತಗೊಳಿಸಿದೆ.
ನೂತನ ಎಸ್ಐಟಿ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ಅಧಿಕಾರ ವಹಿಸಿಕೊಂಡರೆ, ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಅವರನ್ನು ತನಿಖಾ ತಂಡದ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಸೌಜನ್ಯ ಪ್ರಕರಣದ ಹಿನ್ನೆಲೆ
2012ರ ಅಕ್ಟೋಬರ್ನಲ್ಲಿ ಧರ್ಮಸ್ಥಳದ ಬಳಿ ನಡೆದಿದ್ದ 17 ವರ್ಷದ ಬಾಲಕಿ ಸೌಜನ್ಯಾ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ರಾಜ್ಯದ ಅತ್ಯಂತ ಸಂವೇದನಾಶೀಲ ಮತ್ತು ಸುದೀರ್ಘ ಕಾನೂನು ಹೋರಾಟದ ಪ್ರಕರಣಗಳಲ್ಲಿ ಒಂದಾಗಿದೆ.
ನ್ಯಾಯಕ್ಕಾಗಿ ನಿರಂತರ ಹೋರಾಟ:
ಆರಂಭಿಕ ತನಿಖೆ ಹಾಗೂ ನ್ಯಾಯಾಲಯದ ತೀರ್ಪಿನ ಬಳಿಕವೂ ಪ್ರಕರಣದ ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಮತ್ತು ಮರುತನಿಖೆ ನಡೆಸುವಂತೆ ಸೌಜನ್ಯಾ ಅವರ ಪೋಷಕರು, ಹಿತಚಿಂತಕರು ಹಾಗೂ ವಿವಿಧ ಜನಪರ ಹೋರಾಟಗಾರರು ದಶಕಕ್ಕೂ ಅಧಿಕ ಕಾಲದಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಸಾರ್ವಜನಿಕರ ಒತ್ತಡ ಮತ್ತು ಮರುತನಿಖೆಯ ಬೇಡಿಕೆಯ ಹಿನ್ನೆಲೆಯಲ್ಲಿ ಸರ್ಕಾರವು ಇತ್ತೀಚೆಗೆ ಎಸ್ಐಟಿ ರಚಿಸಿತ್ತು. ಸದ್ಯ ತನಿಖಾ ತಂಡದ ಉನ್ನತ ಮಟ್ಟದ ನಾಯಕತ್ವ ಬದಲಾಗಿದ್ದು, ನೂತನ ಮುಖ್ಯಸ್ಥರ ನೇತೃತ್ವದಲ್ಲಿ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಸಂತ್ರತ ಕುಟುಂಬಕ್ಕೆ ಯಾವಾಗ ನ್ಯಾಯ ಸಿಗಲಿದೆ ಎಂಬುದು ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮರುತನಿಖೆ
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮರುತನಿಖೆ
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದರು. ಮರುದಿನ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಸ್ಥಳೀಯ ಪೊಲೀಸರು ನಡೆಸಿದ್ದರು. ಬಳಿಕ ಸಿಐಡಿ ಹಾಗೂ ಸಿಬಿಐ ತನಿಖೆ ನಡೆಸಿದರೂ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗಿರಲಿಲ್ಲ. ಪ್ರಕರಣದ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು 2023ರ ಜೂನ್ನಲ್ಲಿ ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಇದಾದ ಬಳಿಕ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಮರುತನಿಖೆ ನಡೆಸುವಂತೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2026ರ ಸೆಪ್ಟೆಂಬರ್ 21ರಂದು ಪ್ರಕರಣದ ಸಂಪೂರ್ಣ ಹೊಸ ತನಿಖೆ (De Novo Investigation) ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಸೆಪ್ಟೆಂಬರ್ 24ರಂದು ರಾಜ್ಯ ಸರ್ಕಾರ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳ ಎಸ್ಐಟಿ ರಚಿಸಿತ್ತು

