ಜೋಶಿಮಠ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಅದರಲ್ಲಿದ್ದ ಆರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪೈಲಟ್ ಸೇರಿದಂತೆ ಆರು ಜನರು ಬದರಿನಾಥ ಧಾಮದಿಂದ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜೋಶಿಮಠದ ಚಾಯ್ (Chaien) ಗ್ರಾಮದ ಸಮೀಪ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯ ವೇಳೆ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಆದರೆ, ದುರಂತದಲ್ಲಿ ಸಂಭವಿಸಿರುವ ಸಾವು-ನೋವುಗಳ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ಹೆಲಿಕಾಪ್ಟರ್ ಪತನದ ಬಗ್ಗೆ ಸೇನಾ ಘಟಕವೊಂದು ಚಮೋಲಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಪ್ರತಿಕೂಲ ಹವಾಮಾನ ಪರಿಸ್ಥಿತಿಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಸಿಎಂ ಧಾಮಿ ಹೇಳಿದ್ದೇನು?
ಘಟನೆ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಹಿತಿ ಹಂಚಿಕೊಂಡಿದ್ದಾರೆ. ಜೋಶಿಮಠ ಸಮೀಪದ ಚಾಯ್ ಗ್ರಾಮದ ಬಳಿ ಹೆಲಿಕಾಪ್ಟರ್ ಅಪಘಾತ ಸಂಭವಿಸಿರುವ ದುರದೃಷ್ಟಕರ ಸುದ್ದಿ ಬಂದಿದೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಘಟನೆಯ ಸಂಪೂರ್ಣ ಮಾಹಿತಿಯನ್ನು ನಿರಂತರವಾಗಿ ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿದ್ದರೆ, ಉತ್ತಮ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶೋಧ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್ ನಿಯೋಜನೆ
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ಹೆಲಿಕಾಪ್ಟರ್‌ನಲ್ಲಿದ್ದವರ ಗುರುತು, ಅಪಘಾತದ ನಿಖರ ಕಾರಣ ಹಾಗೂ ಸಾವಿನ ಸಂಖ್ಯೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಆರಂಭಿಕ ಮಾಹಿತಿಯ ಪ್ರಕಾರ, ಜೋಶಿಮಠ ಪ್ರದೇಶದ ಹಾಥಿ ಪಹಾಡ್‌ನ ಹಿಂಭಾಗದಲ್ಲಿರುವ ಛಾಯಿ ಗ್ರಾಮದ ಸಮೀಪ ಹೆಲಿಕಾಪ್ಟರ್ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.ನಾಪತ್ತೆಯಾಗಿರುವ ಹೆಲಿಕಾಪ್ಟರ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಲು ಹಾಗೂ ಅದರ ಅವಶೇಷಗಳನ್ನು ಪತ್ತೆಹಚ್ಚಲು ಮತ್ತೆರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಪ್ರದೇಶದಲ್ಲಿ ನಿರಂತರ ಮಳೆ ಹಾಗೂ ದಟ್ಟ ಮೋಡ ಕವಿದ ವಾತಾವರಣ ಇರುವುದರಿಂದ ಶೋಧ ತಂಡಗಳಿಗೆ ಹೆಲಿಕಾಪ್ಟರ್‌ನ ನಿಖರ ಸ್ಥಳವನ್ನು ಪತ್ತೆಹಚ್ಚಲು ತೊಂದರೆಯಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೋಶಿಮಠದ ಉಪವಿಭಾಗಾಧಿಕಾರಿ (SDM), ಘಟನೆಗೆ ಸಂಬಂಧಿಸಿದ ವಿವರಗಳನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಹೆಲಿಕಾಪ್ಟರ್ ಪತನವಾಗಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಅಧಿಕಾರಿಗಳ ತಂಡಗಳು ಶಂಕಿತ ಸ್ಥಳದತ್ತ ತೆರಳುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾದ ಕೂಡಲೇ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

