ನಟಿ ಮೃಣಾಲ್ ಠಾಕೂರ್ ತಮ್ಮ ವಿಶಿಷ್ಟ ಫ್ಯಾಷನ್ ಶೈಲಿಯ ಮೂಲಕ ಸಾಂಪ್ರದಾಯಿಕ ಉಡುಪಿಗೆ ಹೊಸ ರಂಗು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರು ಭೇಟಿಯ ಕೆಲವು ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಸಾಂಪ್ರದಾಯಿಕ ಸೀರೆಯ ಲುಕ್ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಆಲೀವ್ ಗ್ರೀನ್ ಬಣ್ಣದ ಅಪರೂಪದ ಸೀರೆ ಹಾಗೂ ದಟ್ಟ ಬರ್ಗಂಡಿ ಬಣ್ಣದ ಆಕರ್ಷಕ ಎಂಬ್ರಾಯ್ಡರಿ ಬ್ಲೌಸ್ ಧರಿಸಿ ಮೃಣಾಲ್ ಪೋಸ್ ನೀಡಿದ್ದಾರೆ. ಸೀರೆಯಲ್ಲಿರುವ ಸೂಕ್ಷ್ಮವಾದ ಕೆಂಪು ವಿನ್ಯಾಸ ಹಾಗೂ ಸುವರ್ಣ ಜರಿ ಅಂಚುಗಳು ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಸಾಮಾನ್ಯ ಹಬ್ಬದ ದಿನಗಳಲ್ಲಿ ಕಾಣಸಿಗುವ ಸಾಂಪ್ರದಾಯಿಕ ಬಣ್ಣಗಳಿಗಿಂತ ವಿಭಿನ್ನವಾಗಿರುವ ಈ ಕಂಬಿನೇಷನ್, ಹಬ್ಬ-ಹರಿದಿನಗಳಿಗೆ ಅತ್ಯುತ್ತಮ ಫ್ಯಾಷನ್ ಆಯ್ಕೆಯಾಗಿದೆ.
ತಮ್ಮ ಉಡುಪಿಗೆ ಸೂಕ್ತವಾಗುವಂತೆ ದೊಡ್ಡ ಗಾತ್ರದ ಬಂಗಾರದ ಓಲೆಗಳನ್ನು ಧರಿಸಿರುವ ಮೃಣಾಲ್, ಕೇಶವಿನ್ಯಾಸವನ್ನು ಸರಳವಾಗಿ ಕಟ್ಟಿ ನಿಲ್ಲಿಸಿದ್ದಾರೆ. ತಾನಿಷ್ಕ್ ಮಲ್ಹೋತ್ರಾ ಅವರ ಸ್ಟೈಲಿಂಗ್‌ನಲ್ಲಿ, ‘ದಿ ಹೌಸ್ ಆಫ್ ಅರ್ಷಿಯಾ’ ಬ್ರ್ಯಾಂಡ್‌ನ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ.
ಇನ್ನು ಸಿನಿ ಜೀವನದ ವಿಚಾರಕ್ಕೆ ಬಂದರೆ, ಮೃಣಾಲ್ ಠಾಕೂರ್ ಇದೀಗ ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಐಎಫ್‌ಪಿ ಸೀಸನ್ 16 ರಂಗದಲ್ಲಿ ಅವರು ನೀರನ್ನು ಆಧಾರಿತವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ 17 ನಿಮಿಷಗಳ ಮರಾಠಿ ಕಿರುಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ವಿದ್ಯಾರ್ಥಿ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ನಿಶಾಂತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

