HomeIndiaದೆಹಲಿ ಎಸ್‌ಐಆರ್‌: ಮತದಾರರ ಹೆಸರು ಕೈಬಿಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ

ದೆಹಲಿ ಎಸ್‌ಐಆರ್‌: ಮತದಾರರ ಹೆಸರು ಕೈಬಿಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ

ನವದೆಹಲಿ- ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಸಮರ್ಪಕವಾಗಿ ವಿವೇಚನೆ ಬಳಸಿದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 30ರಂದು ನಿಗದಿಯಾಗಿದ್ದ ಗಡುವನ್ನು ವಿಸ್ತರಿಸುವುದಾಗಿ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಭರವಸೆ ನೀಡಿದೆ.

ಮತದಾರರ ವಿಳಾಸ ಬದಲಾವಣೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಈಗಾಗಲೇ 2026ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದು, ನಂತರ ವಿಳಾಸ ಬದಲಾಯಿಸಿದವರನ್ನು ಹೊಸ ಮತದಾರರ ನೋಂದಣಿಗಾಗಿ ಫಾರ್ಮ್-6 ಸಲ್ಲಿಸುವಂತೆ ಕೇಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಇಂತಹವರು ವಿಳಾಸ ಬದಲಾವಣೆಗೆ ಸಂಬಂಧಿಸಿದ ಫಾರ್ಮ್-8 ಸಲ್ಲಿಸಲು ಅವಕಾಶ ನೀಡಬೇಕು ಎಂದು ಸೂಚಿಸಿತು.

ಗಣತಿ ನಮೂನೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸದ ಕಾರಣಕ್ಕೆ ಮತದಾನದ ಹಕ್ಕನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕೇ ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದರು. ತಾತ್ಕಾಲಿಕವಾಗಿ ಮನೆಗಳಿಂದ ದೂರವಿದ್ದವರು, ವಲಸೆ ಕಾರ್ಮಿಕರು ಹಾಗೂ ವಿಳಾಸ ಬದಲಾಯಿಸಿದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಮಾಹಿತಿ ಪ್ರಕಾರ, 47,56,732 ಮತದಾರರು ಗಣತಿ ನಮೂನೆಗಳನ್ನು ಹಿಂದಿರುಗಿಸದ ಕಾರಣ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರಲ್ಲಿ ಸುಮಾರು 2.12 ಲಕ್ಷ ಮಂದಿಯನ್ನು ಮೃತರು ಎಂದು ಹಾಗೂ ಸುಮಾರು 43 ಲಕ್ಷ ಮಂದಿಯನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಈ ಪೈಕಿ ಅನೇಕರು ಇನ್ನೂ ದೆಹಲಿಯಲ್ಲೇ ವಾಸಿಸುತ್ತಿರಬಹುದು ಎಂದು ಅವರು ವಾದಿಸಿದರು.

ಮತದಾರರ ಹೆಸರುಗಳ ಪರೀಶಿಲನೆ

ಕರಡು ಪಟ್ಟಿಯಿಂದ ಹೊರಗುಳಿದ ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸಲು ಅನುಕೂಲವಾಗುವಂತೆ, ಅವರ ಹಿಂದಿನ ವಿಳಾಸಗಳ ವಿವರಗಳೊಂದಿಗೆ ಪಟ್ಟಿಯನ್ನು ಸ್ಥಳೀಯ ಚುನಾವಣಾ ಕಚೇರಿ ಮತ್ತು ಮತಗಟ್ಟೆಗಳಲ್ಲಿ ಪ್ರಕಟಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಾಗ ಸೂಕ್ತ ಪರಿಶೀಲನೆ ನಡೆಸಬೇಕು ಹಾಗೂ ನಮೂನೆ ಸಲ್ಲಿಸಲು ವಿಫಲರಾದವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಲು ಅವಕಾಶ ಕಲ್ಪಿಸಬೇಕು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದೆ. ಈ ಬೆಳವಣಿಗೆಯಿಂದ ದೆಹಲಿಯ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕುಗಳ ರಕ್ಷಣೆಯ ಪ್ರಶ್ನೆ ಮಹತ್ವ ಪಡೆದುಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular