ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಪ್ರತಿಪಕ್ಷಗಳ ಶಕ್ತಿ ಹೆಚ್ಚಿದ್ದು, ಇದೇ ಪರಿಷತ್ ಚುನಾವಣೆಯಲ್ಲಿನ ಅವರ ಗೆಲುವಿಗೆ ಪ್ರಮುಖ ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ಗೆ ಇದರಿಂದ ಹಿನ್ನಡೆಯಾಗಿದೆ ಎಂಬುದನ್ನು ಒಪ್ಪಲಿಲ್ಲ.
ಕಾಂಗ್ರೆಸ್ಗೆ ಹಿನ್ನಡೆಯಾಗಿಲ್ಲ ಎಂದ ಸಚಿವರು
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದನ್ನು ಪಕ್ಷದ ವೈಫಲ್ಯವೆಂದು ಪರಿಗಣಿಸಬಾರದು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಾಲ್ಕು ಕ್ಷೇತ್ರಗಳ ಪೈಕಿ ಕಾಂಗ್ರೆಸ್ಗೆ ಸೇರಿದ ಸ್ಥಾನ ಒಂದೇ ಆಗಿತ್ತು. ಉಳಿದ ಮೂರು ಸ್ಥಾನಗಳು ಈ ಹಿಂದೆ ಬಿಜೆಪಿ ಮತ್ತು ಜೆಡಿಎಸ್ನದ್ದಾಗಿದ್ದವು. ಈಗ ಆ ಪಕ್ಷಗಳು ತಮ್ಮ ಸ್ಥಾನಗಳನ್ನು ಮರಳಿ ಗೆದ್ದಿವೆ ಎಂದು ಅವರು ವಿವರಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯೇ ಗೆಲುವಿಗೆ ಕಾರಣ
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಸ್ಪರ್ಧಿಸಿರುವುದರಿಂದ ಅವುಗಳ ರಾಜಕೀಯ ಬಲ ಹೆಚ್ಚಾಗಿದೆ. ಮೈತ್ರಿಯ ಲಾಭದಿಂದಾಗಿ ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿವೆ ಎಂದು ಸಚಿವರು ವಿಶ್ಲೇಷಿಸಿದ್ದಾರೆ.
ನಾಯಕತ್ವ ಬದಲಾವಣೆಯೇ ಕಾರಣವಲ್ಲ
ಚುನಾವಣಾ ಫಲಿತಾಂಶಕ್ಕೂ ಮುಖ್ಯಮಂತ್ರಿ ಬದಲಾವಣೆ ಅಥವಾ ಕಾಂಗ್ರೆಸ್ ನಾಯಕತ್ವದ ವೈಫಲ್ಯಕ್ಕೂ ಸಂಬಂಧವಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮತ್ತು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೂ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ಸೋಲು ಕಂಡಿತ್ತು ಎಂದು ಅವರು ನೆನಪಿಸಿದ್ದಾರೆ.
ಈ ಪರಿಷತ್ ಚುನಾವಣೆಯ ಫಲಿತಾಂಶವನ್ನು ಮುಂಬರುವ ವಿಧಾನಸಭಾ ಚುನಾವಣೆಯ ಗೆಲುವು-ಸೋಲಿನ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026 ರ ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಎಸ್.ವಿ ಸಂಕನೂರ ಅವರು ಚುನಾಯಿತರಾಗಿರುತ್ತಾರೆ ಎಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ಅವರು ತಿಳಿಸಿದ್ದಾರೆ.
ಅಕ್ಟೋಬರ್ 27 ರಂದು ಬೆಳಿಗ್ಗೆ 8 ಗಂಟೆಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ಅಕ್ಟೋಬರ್ 28 ಮಧ್ಯರಾತ್ರಿ 2 ಗಂಟೆಗೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತು.
ಅಕ್ಟೋಬರ್ 23 ರಂದು ನಡೆದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 97,400 ಮತದಾರರ ಪೈಕಿ 73,658 ಜನ ಮತ ಚಲಾಯಿಸಿದ್ದು, ಶೇ.75.62 ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 45,110 ಪುರುಷರು ಹಾಗೂ 28,548 ಮಹಿಳೆಯರು ಇದ್ದರು.
ಮೊದಲನೆಯ ಪ್ರಾಶಸ್ತ್ಯದ ಮತ ಎಣಿಕೆ ಅಂತ್ಯದಲ್ಲಿ ಎಸ್.ವಿ ಸಂಕನೂರ ಅವರು 33,711 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎಸ್.ವಿ ಸಂಕನೂರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಅವರಿಂದ 9,323 ಅಂತರದ ಮುನ್ನಡೆಯನ್ನು ಪಡೆದು ಚುನಾಯಿತರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಅವರು 24,388 ಮತಗಳು, ಪಕ್ಷೇತರ ಅಭ್ಯರ್ಥಿಯಾದ ನಿಶಾಂತ ಶಂಕರ ಬಂಕಾಪೂರ 143 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ 55 ಮತಗಳು, ಪಕ್ಷೇತರ ಅಭ್ಯರ್ಥಿಯಾದ ತಳವಾರ ಶಿವಕುಮಾರ 42 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಅಬ್ದುಲ್ ಮನ್ನಾನ 120 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಡಾ.ಜಿ.ಎಚ್ ಇಮ್ರಾಪೂರ 338 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಉಮೇಶ ಕೃಷ್ಣಪ್ಪ ದೈವಜ್ಞ 228 ಮತಗಳು, ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿಯಾದ ಕೃಷ್ಣ ಎಚ್. ಬಳೆಗಾರ 141 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಕಾಂತಕುಮಾರ ಆರ್. 4,055 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಜಿಶಾನ ಡಿ. ಶಿರಸಂಗಿ 39 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಜೀಶಾನ ಅಹ್ಮದಖಾನ ಪಠಾಣ 62 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಬಸವರಾಜ ಶಂಕರಪ್ಪ ಕೊಟಗಿ 39 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾದ ಸಂತೋಷ ಮನೋಹರ ವೆರ್ಣಿಕರ್ 85 ಮತಗಳನ್ನು ಪಡೆದಿದ್ದಾರೆ.
ಒಟ್ಟು 73,691 ಮತಗಳಲ್ಲಿ 63,446 ಮತಗಳು ಮಾನ್ಯವಾಗಿದ್ದು, 10,245 ಮತಗಳು ತಿರಸ್ಕøತಗೊಂಡಿದೆ ಎಂದು ಚುನಾವಣಾಧಿಕಾರಿ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ಅವರು ತಿಳಿಸಿದ್ದಾರೆ.

