ಬೆಂಗಳೂರು: ಕರ್ನಾಟಕ ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಕಾದುನೋಡಬೇಕಿದೆ.
ವಿಧಾನ ಪರಿಷತ್ ನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದುಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯವು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ.
ನಾಲ್ಕೂ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪ್ರಾಶಸ್ತ್ಯದ ಮತಗಳ ಎಣಿಕೆಯಾದ ಕಾರಣ ಸ್ಪಷ್ಟ ಚಿತ್ರಣ ಮಧ್ಯಾಹ್ನದ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಪಾಲಿಗೆ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ.
ವಿಧಾನಸಭಾ ಚುನಾವಣೆಯ ಯಶಸ್ಸಿನ ಬಳಿಕ ಪರಿಷತ್‌ನಲ್ಲೂ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಸರ್ಕಾರದ ಆಡಳಿತ ಹಾಗೂ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕತ್ವಕ್ಕೆ ಮತ್ತಷ್ಟು ರಾಜಕೀಯ ಬಲ ಸಿಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ಇದು ಅಸ್ತಿತ್ವ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆ. ಮೇಲ್ಮನೆಯಲ್ಲಿ ಮೈತ್ರಿಕೂಟ ಮೇಲುಗೈ ಸಾಧಿಸಿದರೆ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ರೂಪಿಸಲು ವಿರೋಧ ಪಕ್ಷಗಳಿಗೆ ಹೊಸ ಬಲ ಬರಲಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ 81.98%, ಈಶಾನ್ಯ ಶಿಕ್ಷಕರ ಕ್ಷೇತ್ರ 86.97%, ಆಗ್ನೇಯ ಪದವೀಧರ ಕ್ಷೇತ್ರ 73.58%, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 75.62% ಮತದಾನ ನಡೆದಿತ್ತು.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಪುಟ್ಟಣ್ಣ ಹಾಗೂ ಜೆಡಿಎಸ್‌ನ ಎ.ಪಿ. ರಂಗನಾಥ್ ನಡುವಿನ ಹೋರಾಟ ಭಾರೀ ಕುತೂಹಲ ಮೂಡಿಸಿದೆ. ಅದೇ ರೀತಿ ಈಶಾನ್ಯ ಹಾಗೂ ಪಶ್ಚಿಮ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಕಣದಲ್ಲಿರುವ ಅಭ್ಯರ್ಥಿಗಳು:
> ಬೆಂಗಳೂರು ಶಿಕ್ಷಕರ ಕ್ಷೇತ್ರ
* ಕಾಂಗ್ರೆಸ್ ಅಭ್ಯರ್ಥಿ- ಪುಟ್ಟಣ್ಣ
* ಎನ್‌ಡಿಎ ಅಭ್ಯರ್ಥಿ- ಎ.ಪಿ.ರಂಗನಾಥ್
> ಈಶಾನ್ಯ ಶಿಕ್ಷಕರ ಕ್ಷೇತ್ರ
* ಕಾಂಗ್ರೆಸ್ ಅಭ್ಯರ್ಥಿ- ಶರಣಪ್ಪ ಮಟ್ಟೂರು
* ಎನ್‌ಡಿಎ ಅಭ್ಯರ್ಥಿ- ಶಶೀಲ್ ಜಿ ನಮೋಶಿ
> ಆಗ್ನೇಯ ಪದವೀಧರ ಕ್ಷೇತ್ರ
* ಕಾಂಗ್ರೆಸ್ ಅಭ್ಯರ್ಥಿ- ಶಶಿ ಹುಲಿಕುಂಟೆಮಠ
* ಎನ್‌ಡಿಎ ಅಭ್ಯರ್ಥಿ- ಕೆ.ಎಂ.ಸುರೇಶ್
> ಪಶ್ಚಿಮ ಪದವೀಧರ ಕ್ಷೇತ್ರ
* ಕಾಂಗ್ರೆಸ್ ಅಭ್ಯರ್ಥಿ- ಮೋಹನ್ ಲಿಂಬಿಕಾಯಿ
* ಎನ್‌ಡಿಎಅಭ್ಯರ್ಥಿ- ಎಸ್.ವಿ. ಸಂಕನೂರು

