HomeKarnatakaಚಿನ್ನದ ಅಂಬಾರಿ ರಾಜಮನೆತನದ ಆಸ್ತಿ ಹೊರತು ಸರ್ಕಾರದ ಆಸ್ತಿಯಲ್ಲ: ಜಟ್ಟಿ ಕಾಳಗದ ಬಗ್ಗೆಯೂ ಸ್ಪಷ್ಟನೆ...

ಚಿನ್ನದ ಅಂಬಾರಿ ರಾಜಮನೆತನದ ಆಸ್ತಿ ಹೊರತು ಸರ್ಕಾರದ ಆಸ್ತಿಯಲ್ಲ: ಜಟ್ಟಿ ಕಾಳಗದ ಬಗ್ಗೆಯೂ ಸ್ಪಷ್ಟನೆ ನೀಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಆದರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಉಂಟಾದ ಗೊಂದಲ, ಪೊಲೀಸ್ ಅಧಿಕಾರಿಗಳ ವರ್ತನೆ ಬಗ್ಗೆ ರಾಜಮಾತೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚಿನ್ನದ ಅಂಬಾರಿ ಬಗೆಗಿನ ಸರ್ಕಾರದ ಗೊಂದಲದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದಿರುವ ಪ್ರಮೋದಾದೇವಿ ಒಡೆಯರ್, ಚಿನ್ನದ ಅಂಬಾರಿಯ ಭದ್ರತೆ ವಿಚಾರದಲ್ಲಿಯೂ ಪೊಲೀಸ್ ಇಲಾಖೆಯ ವಿರುದ್ಧ ಪ್ರಮೋದಾದೇವಿ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಮೇರೆಗೆ ಅಂಬಾರಿ ನೀಡಿದ್ದೆ. ಆದರೆ, ಆ ಭರವಸೆಯನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.

ಅಂಬಾರಿ ಸುತ್ತ ಅನಧಿಕೃತ ವ್ಯಕ್ತಿಗಳು ಓಡಾಡಿದ್ದು, ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿ ಬಳಿ ಬಂದಿದ್ದರು. ಇದು ಅಂಬಾರಿಯ ಭದ್ರತೆಗೆ ಧಕ್ಕೆ ಉಂಟುಮಾಡಿದೆ ಎಂದು ದೂರಿದ್ದಾರೆ. ಅಂಬಾರಿ ರಾಜಮನೆತನದ ಖಾಸಗಿ ಆಸ್ತಿಯೇ ಹೊರತು ಸರ್ಕಾರದ ಆಸ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರು ದಸರಾ ಆಚರಣೆಯ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ಪುಟಗಳ ಸುದೀರ್ಘ ಪತ್ರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ, ಪೊಲೀಸ್ ಇಲಾಖೆಯ ನಡೆ ಹಾಗೂ ಗಜಪಡೆ ಆಯ್ಕೆಯಲ್ಲಿನ ಗೌಪ್ಯತೆಯನ್ನು ಪ್ರಶ್ನಿಸಿದ್ದಾರೆ. ರಾಜಮನೆತನದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದರೆ ಉಚ್ಚ ನ್ಯಾಯಾಲಯದ ಮೊರೆ ಹೋಗಲು ನಾವು ಸ್ವತಂತ್ರರು ಎಂದು ಎಚ್ಚರಿಕೆ ನೀಡಿದ್ದಾರೆ.

ಅರಮನೆಯ ಅತಿಥಿಗಳಿಗಾಗಿ ಮೀಸಲಿಟ್ಟಿದ್ದ ಖಾಸಗಿ ಸ್ಥಳವನ್ನು ಅತಿಕ್ರಮಿಸಲಾಗಿದೆ ಮತ್ತು ಅನಧಿಕೃತ ತಡೆಬೇಲಿ ಹಾಕಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಪ್ರಮೋದಾದೇವಿ ಆರೋಪಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನವರಾತ್ರಿ ಆಚರಣೆಯ ಸಂದರ್ಭದಲ್ಲಿ ರಾಜಮನೆತನದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಿರುವುದು ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.

ವಜ್ರಮುಷ್ಟಿ ಕಾಳಗ’ವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ನಿಲ್ಲಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿ. ಹಿಂದೆ, 1970 ಮತ್ತು 1980ರ ದಶಕಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ, ಬೇರೆ ಬೇರ ಕಾರಣಗಳಿಂದಾಗಿ ವಜ್ರಮುಷ್ಟಿ ಕಾಳಗವನ್ನು ನಡೆಸಲಾಗಿರಲಿಲ್ಲ. ಇತ್ತೀಚೆಗೆ, 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ, ದಸರಾ ಆಚರಣೆಗಳ ಭಾಗವಾಗಿ ವಜ್ರಮುಷ್ಟಿ ಕಾಳಗವನ್ನು ನಡೆಸಲಾಗಿರಲಿಲ್ಲ. ಆದ್ದರಿಂದ, ಇದನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ನಿಲ್ಲಿಸಲಾಗಿದೆ ಎಂಬ ಹೇಳಿಕೆಯು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಪ್ರಮೋದಾದೇವಿ ತಿಳಿಸಿದ್ದಾರೆ.

ಶತಮಾನಗಳಿಂದಲೂ ಒಡೆಯರ್ ವಂಶಸ್ಥರು ವಜ್ರಮುಷ್ಟಿ ಕಾಳಗಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ. ಇಂದಿಗೂ ಸಹ, ವಿಜಯದಶಮಿಯ ಭಾಗವಾಗಿ ಈ ಕ್ರೀಡೆಯನ್ನು ನಾವೂ ಸಹ ಪ್ರೋತ್ಸಾಹಿಸುತ್ತಲೇ ಇದ್ದೇವೆ. ವಜ್ರಮುಷ್ಟಿ ಕಾಳಗದ ಸಂದರ್ಭದಲ್ಲಿ, ಮಲ್ಲರಲ್ಲಿ ಒಬ್ಬರಿಗೆ ತಲೆಯ ಮೇಲೆ ಗಾಯವಾಗುವುದು ಕೇವಲ ಆ ಕುಸ್ತಿ ಪಂದ್ಯದ ಅಂತ್ಯವನ್ನು ಸೂಚಿಸುತ್ತದೆಯೇ ಹೊರತು, ವಿಜಯದಶಮಿಯ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಧಾರ್ಮಿಕ ಮಹತ್ವವನ್ನಾಗಲಿ ಅಥವಾ ಸಂಕೇತವನ್ನಾಗಲಿ ಹೊಂದಿರುವುದಿಲ್ಲ ಎಂದು ವಿವರಿಸಿದ್ದಾರೆ.

ಪವಿತ್ರವಾದ ರಾಜಖಡ್ಗದಿಂದ (ಪಟ್ಟದ ಕತ್ತಿ) ಕುಂಬಳಕಾಯಿಯನ್ನು ಕತ್ತರಿಸುವ ವಿಧಿಯು, ‘ಉತ್ತರ ಪೂಜೆ’ಗೆ ಸಂಬಂಧಿಸಿದ ಆಚರಣೆಗಳನ್ನು ಸೂಚಿಸುತ್ತದೆ. ಇದಲ್ಲದೆ, ‘ವಿಜಯ ಯಾತ್ರೆ’ಗಾಗಿ ಒಂದು ಶುಭ ಮುಹೂರ್ತವನ್ನು ನಿಗದಿಪಡಿಸಲಾಗುತ್ತದೆ. ಈ ವರ್ಷವೂ ನಾವು ವಿಜಯ ಯಾತ್ರೆಗಾಗಿ ನಿಗದಿಪಡಿಸಿದ ಮುಹೂರ್ತವನ್ನೇ ಅನುಸರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2024ಕ್ಕೂ ಮೊದಲು, ವಿಜಯದಶಮಿಯ ಹಿಂದಿನ ದಿನ ‘ಜಟ್ಟಿ’ (ಮಲ್ಲರು) ಸಮುದಾಯದವರಿಗೆ ಅರಮನೆಯ ಆವರಣದಲ್ಲಿ ಉಳಿದುಕೊಳ್ಳಲು ಅನುಮತಿ ನೀಡಲಾಗುತ್ತಿತ್ತು. ಆದರೆ, 2024ರಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಂದಾಗಿ, ಅರಮನೆಯ ಆವರಣದಲ್ಲಿ ಅವರು ಉಳಿದುಕೊಳ್ಳುವ ಅನುಮತಿಯನ್ನು ರದ್ದುಗೊಳಿಸಲಾಯಿತು. ವಿಜಯದಶಮಿಗೆ ಮುನ್ನ ಜಟ್ಟಿ ಸಮುದಾಯದ ಉಸ್ತಾದರು (ಮುಖ್ಯಸ್ಥರು) ನನ್ನನ್ನು ಭೇಟಿಯಾಗುತ್ತಾರೆ. ಆ ಸಂದರ್ಭದಲ್ಲಿ ವಜ್ರಮುಷ್ಟಿ ಕಾಳಗದ ಸಮಯ ಮತ್ತು ಇತರ ಅಗತ್ಯ ವ್ಯವಸ್ಥೆಗಳ ಕುರಿತು ಅವರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗುತ್ತದೆ.

ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಮಲ್ಲರ ಒಂದು ಗುಂಪು ಈಗಾಗಲೇ ಅರಮನೆಯ ಆವರಣವನ್ನು ಪ್ರವೇಶಿಸಿತ್ತು, ಆದರೆ ಇನ್ನೊಂದು ಗುಂಪಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಎರಡೂ ಗುಂಪುಗಳು ಪರಸ್ಪರ ಸಮನ್ವಯ ಸಾಧಿಸಿ ಒಟ್ಟಿಗೆ ಬಂದಿದ್ದರೆ, ಉಂಟಾದ ಗೊಂದಲವನ್ನು ತಪ್ಪಿಸಬಹುದಿತ್ತು. ಅದೇ ಸಮಯದಲ್ಲಿ, ಒಂದು ನಿರ್ದಿಷ್ಟ ದ್ವಾರದಲ್ಲಿದ್ದ ಪೊಲೀಸ್ ಸಿಬ್ಬಂದಿ, ತಮಗೆ ಮಾತ್ರ ತಿಳಿದಿರುವ ಕಾರಣಗಳನ್ನು ನೀಡಿ, ಅವರನ್ನು ಒಳಗೆ ಬಿಡಲು ನಿರಾಕರಿಸಿದರು ಎಂಬ ವಿಷಯವೂ ನನ್ನ ಗಮನಕ್ಕೆ ಬಂದಿದೆ. ಪ್ರತಿ ವರ್ಷವೂ ಜಟ್ಟಿ ಸಮುದಾಯ ಮತ್ತು ಪೊಲೀಸ್ ಸಿಬ್ಬಂದಿಯ ನಡುವೆ ಇಂತಹ ಸಮಸ್ಯೆಗಳು ಮರುಕಳಿಸುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ವರ್ತನೆಯ ಬಗ್ಗೆ ಅವರ ಮೇಲಧಿಕಾರಿಗಳು ಸೂಕ್ತ ಸೂಚನೆಗಳನ್ನು ನೀಡುವ ಮೂಲಕ ಕ್ರಮ ಕೈಗೊಳ್ಳಬೇಕಿದೆ. ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ, ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸೆಲ್ಫಿ ಹಾಗೂ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮುಗಿಬೀಳುವುದು ಆಘಾತಕಾರಿ ಸಂಗತಿಯಾಗಿದೆ. ಇದು ಅವರಲ್ಲಿನ ಶಿಸ್ತಿನ ಕೊರತೆಯನ್ನು ತೋರಿಸುವುದಲ್ಲದೆ, ಕರ್ತವ್ಯ ಲೋಪಕ್ಕೂ ಎಡೆಮಾಡಿಕೊಡುತ್ತದೆ ಎಂದಿದ್ದಾರೆ.

ರಾಜ ಕುಟುಂಬಕ್ಕಾಗಿ ಮತ್ತು ನಮ್ಮ ಅತಿಥಿಗಳಿಗೆ ಮೀಸಲಿಟ್ಟಿರುವ ಅರಮನೆಯ ಖಾಸಗಿ ಪಾರ್ಕಿಂಗ್ ಸ್ಥಳವನ್ನು ಪೊಲೀಸರು ತಮ್ಮ ವಾಹನಗಳನ್ನು ನಿಲ್ಲಿಸುವ ಮೂಲಕ ಅತಿಕ್ರಮಿಸಿದ್ದಾರೆ. ಅಲ್ಲದೆ, ಯಾವುದೇ ವಿವೇಚನೆಯಿಲ್ಲದ ಹಾಕಲಾದ ತಡೆಬೇಲಿಗಳು ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಪಡಿಸುತ್ತಿವೆ ಮತ್ತು ಅನಗತ್ಯ ತೊಡಕುಗಳನ್ನು ಸೃಷ್ಟಿಸುತ್ತಿವೆ. ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ದಸರಾಕ್ಕೆ ಯಾವುದೇ ಧಾರ್ಮಿಕ ಮಹತ್ವ, ಸಂಬಂಧವಿಲ್ಲ: ಇಂತಹ ಅಹಿತಕರ ಘಟನೆಗಳು ಪದೇ ಪದೆ ನಡೆಯುತ್ತಿರುವುದರಿಂದ, ವಿಜಯದಶಮಿಯಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆಯನ್ನು ನಡೆಸುವ ನಿರ್ಧಾರದ ಬಗ್ಗೆ ನಾನು ಮರುಪರಿಶೀಲಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಏಕೆಂದರೆ, ಇದು ನಮ್ಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಘರ್ಷ ಉಂಟುಮಾಡುತ್ತಿದೆ. ನಮ್ಮ ನವರಾತ್ರಿ ಆಚರಣೆಗಳಲ್ಲಿ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಪುಮುಖ ಭಾಗವಾಗಿವೆ. ಆದರೆ, ಸರ್ಕಾರಿ ದಸರಾಕ್ಕೆ ಅಂತಹ ಯಾವುದೇ ಧಾರ್ಮಿಕ ಮಹತ್ವ ಅಥವಾ ಸಂಬಂಧವಿಲ್ಲ. ಸರ್ಕಾರಿ ಇಲಾಖೆಗಳ ನಡುವಿನ ಸಹಕಾರದ ಕೊರತೆ ಮತ್ತು ಸಮನ್ವಯದ ಅಭಾವವು ನಮಗೆ ತೀವ್ರ ತೊಂದರೆಯನ್ನು ಉಂಟುಮಾಡುತ್ತಿದ್ದು, ನಮ್ಮ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸರ್ಕಾರದ ‘ನಾಡಹಬ್ಬ’ (ದಸರಾ) ಮತ್ತು ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಗಮವಾಗಿ ನೆರವೇರಲಿ ಎಂಬ ಉದ್ದೇಶದಿಂದ, ನಾನು ಕೆಲವು ಸಲಹೆಗಳನ್ನು ನೀಡಬಯಸುತ್ತೇನೆ. ಈ ಸಲಹೆಗಳಿಗೆ ಸಾರ್ವಜನಿಕರ ಬೆಂಬಲವನ್ನು ಕೋರುತ್ತೇನೆ ಮತ್ತು ಸರ್ಕಾರವು ನನ್ನ ಈ ಕೆಳಗಿನ ಸಲಹೆಗಳನ್ನು ಪರಿಗಣಿಸುತ್ತದೆ ಎಂದು ಆಶಿಸುತ್ತೇನೆ.

1. ಮೊದಲ ದಿನದಿಂದ ಏಳನೇ ದಿನದವರೆಗೆ, ಸರ್ಕಾರವು ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು.

2. ಆಯುಧ ಪೂಜೆ ಮತ್ತು ವಿಜಯದಶಮಿಯ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕು. ಇದರಿಂದ ರಾಜ ಕುಟುಂಬವು ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗಳನ್ನು ನೆರವೇರಿಸಲು ಸಾಧ್ಯವಾಗುತ್ತದೆ.

3. ಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನದಂದೇ, ಸರ್ಕಾರವು ಶ್ರೀ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಮೆರವಣಿಗೆಯನ್ನು ನಡೆಸಬಹುದು. ಅಂದು ಸಂಜೆ ಸೂಕ್ತ ಸಮಯದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಈ ಮೆರವಣಿಗೆಯನ್ನು ನಡೆಸುವುದು ಸೂಕ್ತವಾಗಿರುತ್ತದೆ.

ಪೂಜೆಗಳು ಮತ್ತು ಇತರ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸುವಲ್ಲಿ ಯಾವುದೇ ಅಡಚಣೆ ಉಂಟಾದಲ್ಲಿ, ತಾವು ಕರ್ನಾಟಕ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವತಂತ್ರರು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ, ನಾವು ಪ್ರತಿ ವರ್ಷವೂ ಅಂತಹ ಕ್ರಮ ಕೈಗೊಳ್ಳುವುದರಿಂದ ದೂರವೇ ಉಳಿದಿದ್ದೇನೆ.

ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಅಂಬಾರಿಯನ್ನು ಹೊರುವ ಆನೆಯ ವಿಷಯವನ್ನು ನಮ್ಮಿಂದ ಮುಚ್ಚಿಡಲಾಗಿತ್ತು. ಕೊನೆಯ ಕ್ಷಣದವರೆಗೂ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಾರ್ಯಕ್ರಮಕ್ಕೆ ಐದು ದಿನಗಳಿರುವಾಗ, ಅಂಬಾರಿ ಹೊರುವ ಜವಾಬ್ದಾರಿಯನ್ನು ಯಾವ ಆನೆಗೆ ನೀಡಲಾಗಿದೆ ಎಂದು ತಿಳಿಸುವಂತೆ ನಾನು ಸ್ವತಃ ಡಿಸಿಎಫ್ ಅವರ ಬಳಿ ಕೇಳಬೇಕಾಯಿತು. ಯಾವುದೇ ಕಾರಣವಿಲ್ಲದ, ಈ ಪರಿಸ್ಥಿತಿಯು ನಮಗೆ ತೀವು ಒತ್ತಡವನ್ನು ಉಂಟುಮಾಡಿತು ಎಂದಿದ್ದಾರೆ.

ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗಲಿ ಎಂದು ನಾನು ವಿಶೇಷ ಆಸಕ್ತಿ ವಹಿಸಿ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇನೆ. ಆದರೆ, ನಮ್ಮ ಸಹಕಾರವನ್ನು ಅವರು ಕೇವಲ ಒಂದು ಸಾಮಾನ್ಯ ಸಂಗತಿ ಎಂದು ಪರಿಗಣಿಸಿ ನಿರ್ಲಕ್ಷ್ಯ ತೋರುತ್ತಿರುವುದು ನನಗೆ ನಿರಾಶೆ ತಂದಿದೆ. ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ನನ್ನ ಸಲಹೆಗಳನ್ನು ಪರಿಗಣಿಸಬೇಕು ಮತ್ತು ಮೌಲೀಕರಿಸಬೇಕು ಎಂದು ಬಯಸುತ್ತೇನೆ. ನಾಡದೇವತೆಗೆ ತಕ್ಕ ಗೌರವ ಮತ್ತು ವೈಭವದೊಂದಿಗೆ ರಥೋತ್ಸವದ ದಿನದಂದು ಮೆರವಣಿಗೆಯನ್ನು ನಡೆಸುವ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular