HomeKarnatakaರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ 1000 ಬಸ್ ನಿಲ್ದಾಣ ನಿರ್ಮಾಣ

ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ 1000 ಬಸ್ ನಿಲ್ದಾಣ ನಿರ್ಮಾಣ

ಶಿವಮೊಗ್ಗ: ವಿಬಿ ಜಿ ರಾಮ್‌ಜಿ ಯೋಜನೆಯಡಿ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ 1000 ಬಸ್‌ ನಿಲ್ದಾಣಗಳನ್ನು 15 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಹೆಚ್ಚು ಜನಸಂದಣಿಯ ಪ್ರದೇಶಗಳನ್ನು ಗುರುತಿಸುವಂತೆ ಹಾಗೂ ಉದ್ದೇಶಿತ ಬಸ್‌ ನಿಲ್ದಾಣದ ಮಾದರಿಯನ್ನು ಶೀಘ್ರದಲ್ಲಿ ಕಳುಹಿಸಿಕೊಡಲಾಗುವುದು ಎಂದರು.

ಇದೇ ಯೋಜನೆಯಡಿಯಲ್ಲಿ ಸ್ಮಶಾನ ಅಭಿವೃದ್ಧಿ, ಬೇಲಿ, ಕಾಂಪೌಂಡ್‌ ನಿರ್ಮಾಣ, ಕಾಲುಸಂಕ, ಕೆರೆ ಅಭಿವೃದ್ಧಿ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅವರು ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ, ಸಕಾಲದಲ್ಲಿ ಅವುಗಳಿಗೆ ಪರಿಹಾರ ಕಲ್ಪಿಸಿಕೊಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರಕ್ಕೊಮ್ಮೆ ಕಚೇರಿಯಲ್ಲಿ ಗ್ರಾಮಸಭೆ ಆಯೋಜಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಎಲ್ಲಾ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ. ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಅಗತ್ಯವಿದ್ದಲ್ಲಿ ಪೊಲೀಸ್‌ ರಕ್ಷಣೆ ಪಡೆಯಿರಿ. ಎಷ್ಟೇ ಪ್ರಭಾವಿಗಳಾಗಿದ್ದರೂ ಕಾರ್ಯಾಚರಣೆಯಿಂದ ಹಿಂದೆ ಸರಿಯುವಂತಿಲ್ಲ. ಪ್ರಭಾವಿಗಳಿಂದಲೇ ಈ ಕಾರ್ಯ ಆರಂಭಗೊಳ್ಳಲಿ ಎಂದ ಅವರು, ಶಿಕಾರಿಪುರ ತಾಲೂಕು ಒಂದರಲ್ಲೇ 354ಕೆರೆಗಳು ಒತ್ತುವರಿಯಾಗಿದ್ದು, ಗಮನಕ್ಕೆ ಬಂದಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದರು.

ಕೆರೆಗಳ ತೆರವು ಕಾರ್ಯಕ್ಕೆ ಅಗತ್ಯವಿರುವ ಅನುದಾನದಿಂದ ಸಂಬಂಧಿಸಿದ ಇಲಾಖೆಯಿಂದಲೇ ಭರಿಸಲಾಗುವುದು. ಅದಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಗುರಿ ನಿಗದಿಪಡಿಸಬೇಕು.ಅದಕ್ಕಾಗಿ ಪ್ರತಿ ಮಾಹೆ ಸಭೆ ನಡೆಸಿ, ಪ್ರಗತಿ ಪರಿಶೀಲಿಸಬೇಕು. ಒತ್ತುವರಿಯಾಗಿರುವ ಒಟ್ಟು ಕೆರೆಗಳಲ್ಲಿ ಶೇ.10ರಷ್ಟಾದರೂ ಪ್ರತಿ ತಿಂಗಳು ಪ್ರಗತಿ ಸಾಧಿಸಿ, ಮುಂದಿನ ಒಂದು ವರ್ಷದೊಳಗಾಗಿ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳ್ಳಬೇಕು. ಕೆರೆಗಳಿಗೆ ತ್ಯಾಜ್ಯ, ಮಲಿನ ನೀರು ಸೇರದಂತೆ ವಿಶೇಷ ಗಮನಹರಿಸಬೇಕು ಎಂದರು.

ಗ್ರಾಮೀಣ ನೀರು ಪೂರೈಕೆಗೆ 67000 ಕೋಟಿ ರೂ.ಕಾಮಗಾರಿ

ಅಂತರ್ಜಲ ಮಟ್ಟ ಎಲ್ಲೆಡೆ ಕುಸಿಯುತ್ತಿದ್ದು, ಮೇಲ್ಮೈ ನೀರಿನಿಂದ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಏಕ ಗ್ರಾಮ ಕುಡಿಯುವ ನೀರು ಯೋಜನೆಗೆ 67 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ  ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಏಕಗ್ರಾಮ ಕುಡಿಯುವ ನೀರು ಯೋಜನೆಯು ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಶೇ.40ರಷ್ಟು ಕಾಮಗಾರಿ ಇನ್ನೂ ಆಗಬೇಕಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮುಗಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚಿಸಿದರು.

ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು  ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ನೀರು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್ ಬಾಡಿಗೆಗೆ ಪಡೆದು ಅಥವಾ ಪರ್ಯಾಯ ಜಲ ಮೂಲದಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸೂಚನೆ ನೀಡಿದರು.

ಈ ರೀತಿ ನೀರು ಪೂರೈಕೆ ಮಾಡುವ ಟ್ಯಾಂಕರ್ ಮಾಲೀಕರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಬೇಕು. ತಿಂಗಳುಗಟ್ಟಲೆ ಅವರಿಗೆ ಹಣ ಪಾವತಿಸದಿದ್ದರೆ ಅವರು ಟ್ಯಾಂಕರ್ ನೀಡುವುದಿಲ್ಲ. ಇದರಿಂದ ಜನರಿಗೆ ಅನಗತ್ಯ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಗ್ರಾಮೀಣ ನೀರು ಪೂರೈಕೆಗೆ ಸಾಕಷ್ಟು ಹಣವಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಹಣ ಬಳಕೆ ಆಗಿರುವುದು ಕಂಡುಬಂದಿರುವುದಿಲ್ಲ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸುವಂತೆ ಸೂಚಿಸಿದ ಸಚಿವರು, ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಕ್ರಮ ವಹಿಸುವಂತೆಯೂ ತಿಳಿಸಿದರು.

ಅರಣ್ಯ ಸಮಸ್ಯೆ ಪರಿಹರಿಸಲು ಕ್ರಮ:

ಕೆಲವು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಏಕಗ್ರಾಮ ಕುಡಿಯುವ ನೀರು ಯೋಜನೆಯಡಿ ಕೊಳವೆಗಳನ್ನು ಅಳವಡಿಸಲು ಅರಣ್ಯ ಪ್ರದೇಶ ಇರುವ ಕಾರಣ ವಿಳಂಬವಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದಾಗ, ಈ ಸಂಬಂಧ ಅರಣ್ಯ ಸಚಿವರು ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ಗ್ರಾಮೀಣ ಜನರ ಆಸ್ತಿಗೆ ಸಂಬಂಧಿಸಿದಂತೆ ಇ-ಸ್ವತ್ತು ನೀಡುವುದು ಕೂಡ ಪಂಚಾಯತಿಗಳ ಜವಾಬ್ದಾರಿಯಾಗಿದೆ. ಆದರೆ ಅನಗತ್ಯವಾಗಿ ವಿಳಂಬವಾಗುತ್ತಿರುವ ದೂರುಗಳು ಬರುತ್ತಿದ್ದು, ಜನರು ಪಂಚಾಯತಿ ಕಚೇರಿಗಳಿಗೆ ಅಲೆದಾಡದಂತೆ ಅವರಿಗೆ ಸೇವೆಗಳನ್ನು ಒದಗಿಸುವಂತೆ ಸಚಿವರು ನಿರ್ದೇಶನ ನೀಡಿದ ಅವರು,

ರಾಜ್ಯದ ಶೇ.60ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಪಂಚಾಯತಿ ಅಧಿಕಾರಿ, ಸಿಬ್ಬಂದಿಗೆ ಲಭಿಸಿದೆ. ಸೇವಾ ಮನೋಭಾವದಿಂದ ಮತ್ತು ದಕ್ಷತೆಯಿಂದ ಕೆಲಸ ಮಾಡಿದರೆ ಜನರೂ ಮೆಚ್ಚುತ್ತಾರೆ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರುಗಳಾದ ಬಿ.ಕೆ. ಸಂಗಮೇಶ್, ಶಾರದಾ ಪೂರ್ಯಾನಾಯಕ್, ಬಿಲ್ಕಿಶ್ ಭಾನು, ಆಯುಕ್ತರಾದ ವೈ.ಎಸ್. ಪಾಟೀಲ್, ಶಿವಮೊಗ್ಗ ಜಿ.ಪಂ. ಸಿಇ.ಓ ರಿಷಿ ಆನಂದ್, ವಿಬಿಜಿ ರಾಮ್ ಜಿ ನಿರ್ದೇಶಕ ದಿಡ್ಡಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular