ಅನಂತಗಿರಿ: ರಸ್ತೆ ಕಾಮಗಾರಿ ವೇಳೆ ಏಕಾಏಕಿ ಭೀಕರ ಸ್ಫೋಟ ಸಂಭವಿಸಿದ್ದು, ಶಿಕ್ಷಕಿ ಸೇರಿ ಐಅವರು ಸಾಅವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಅನಂತಗಿರಿ ಮಂಡಲದ ಪಿನಕೋಟ ಗ್ರಾಮದಲ್ಲಿ ಘಾಟ್ ರಸ್ತೆಯ ವಿಸ್ತರಣೆಗಾಗಿ ಬಂಡೆಗಳನ್ನು ಸ್ಫೋಟಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಜಿಲೆಟಿನ್ ಕಡ್ಡಿಗಳನ್ನು ಹೊಂದಿದ್ದ ವಿಶೇಷ ಸಾಧನವನ್ನು ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿತ್ತು. ಈ ವೇಳೆ ಸ್ಫೋಟಕ ಸಾಧನದಲ್ಲಿ ತಾಂತ್ರಿಕ ದೋಷ ಉಂಟಾಗಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಐವರು ಸಾವನ್ನಪ್ಪಿದ್ದು, ಎರಡು ವಾಹನಗಳು ಸಂಪೂರ್ಣ ಹಾನಿಯಾಗಿವೆ.
ಈ ದುರಂತದಲ್ಲಿ ವಾಹನದ ಚಾಲಕ ಮತ್ತು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ವಾಹನದಲ್ಲಿ ಬರುತ್ತಿದ್ದ ಶಿಕ್ಷಕಿಯೊಬ್ಬರೂ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಮೃತ ಶಿಕ್ಷಕಿಯನ್ನು ವಿಶಾಖಪಟ್ಟಣಂನ ಸುನೀತಾ ಎಂದು ಗುರುತಿಸಲಾಗಿದೆ. ಇನ್ನು ದೇವರಪಲ್ಲಿಯ ಕಾರ್ಮಿಕ ಮಣಿ, ಚಿದಿಕಾಡದ ಕಾರ್ಮಿಕ ನಾರಾಯಣರಾವ್ ಹಾಗೂ ಕಡಪದ ಪವನ್ ಕುಮಾರ್ ಮೃತರು. ಮೃತಪಟ್ಟವರಲ್ಲಿ ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ಭಾರಿ ಶಬ್ದ ಕೇಳಿ ಭೂಕಂಪ ಸಂಭವಿಸಿದೆ ಎಂದು ಭಾವಿಸಿದ ಸ್ಥಳೀಯರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದರು. ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಮತ್ತು ಮಿನಿ ಟ್ರಕ್ ಒಂದಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಅವರು ಆಘಾತಕ್ಕೊಳಗಾದರು. ಸ್ಫೋಟದ ತೀವ್ರತೆಗೆ ಟ್ರಕ್‌ನ ಕ್ಯಾಬಿನ್ (ಚಾಲಕನ ಕುಳಿತುಕೊಳ್ಳುವ ಭಾಗ) ಘಟನಾ ಸ್ಥಳದಿಂದ ದೂರದಲ್ಲಿ ಬಿದ್ದಿತ್ತು.
ಘಟನೆ ನಡೆದ ತಕ್ಷಣ ಸ್ಥಳೀಯ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಅಖಲಿಸಲಾಗಿದೆ.
ಘಟನೆಗೆ ಆಂಧ್ರಪ್ರದೇಶದ ಗೃಹ ಸಚಿವೆ ವಂಗಲಪುಡಿ ಅನಿತಾ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲೂರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ವಿವರಗಳನ್ನು ಪಡೆದುಕೊಂಡಿದ್ದಾರೆ.
ರಸ್ತೆ ಕಾಮಗಾರಿವೇಳೆ ಸಂಭವಿಸಿದ ಸ್ಫೋಟದಲ್ಲಿ ಐವರು ಸಾವನ್ನಪ್ಪಿರುವ ಘಟನೆಯಿಂದ ತೀವ್ರ ದುಃಖವಾಗಿದೆ.ಇದು ಅತ್ಯಂತ ನೋವಿನ ಘಟನೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಸಂತ್ರಸ್ತ ಕುಟುಂಬಗಳ ನೆರವಿಗೆ ರಾಜ್ಯ ಸರ್ಕಾರ ನಿಲ್ಲಲಿದ್ದು, ಅಗತ್ಯ ಸಹಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದರು. ಈ ದುರಂತದಲ್ಲಿ ಜನರು ಮೃತಪಟ್ಟಿರುವುದಕ್ಕೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೃತರ ಕುಟುಂಬಗಳಿಗೆ ಸರ್ಕಾರವು ಬೆಂಬಲವಾಗಿ ನಿಲ್ಲಲಿದೆ ಎಂದು ಉಪಮುಖ್ಯಮಂತ್ರಿ ಭರವಸೆ ನೀಡಿದರು. ಅಲ್ಲುರಿ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಚಿವರಾದ ಕೊಲ್ಲು ರವೀಂದ್ರ, ಅಚ್ಚೆನ್ನಾಯ್ಡು, ಸಂಧ್ಯಾರಾಣಿ ಮತ್ತು ವಸಂಶೆಟ್ಟಿ ಸುಭಾಷ್ ಅವರು ಸಂತಾಪ ಸೂಚಿಸಿದ್ದಾರೆ.

