ನವದೆಹಲಿ: ಬಹು ಕೊಲೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಹರಿಯಾಣದ ಗ್ಯಾಂಗ್ ಸ್ಟರ್ ಹಿಮಾಂಶು ಭಾವು ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ
ಹರಿಯಾಣದ ದರೋಡೆಕೋರ ಹಿಮಾಂಶು ಭಾವು ನನ್ನು ಅಮೆರಿಕದಲ್ಲಿ ಎಫ್ಬಿಐ ಬಂಧಿಸಿದೆ. ಭಾರತದಾದ್ಯಂತ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿರುವ ಮತ್ತೊಬ್ಬ ದರೋಡೆಕೋರ ನೀರಜ್ ಫರೀದ್ ಪುರಿಯಾ ಅವರನ್ನು ಸಹ ಆತನೊಂದಿಗೆ ಬಂಧಿಸಲಾಗಿದೆ. ಇಬ್ಬರೂ ಅಮೆರಿಕದಲ್ಲಿ ವಾಸಿಸುತ್ತಿದ್ದರು ಮತ್ತು ಹರಿಯಾಣ ವಿಶೇಷ ಕಾರ್ಯಪಡೆ (ಎಸ್ಟಿಎಫ್)ಯ ಮಾಹಿತಿಯ ನಂತರ ಅವರ ಬಂಧನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಹರಿಯಾಣದ ರೋಹ್ಟಕ್ ನ ರಿಟೋಲಿ ಗ್ರಾಮದ ಹಿಮಾಂಶು ಭಾವು ಕೊಲೆ, ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ. ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಮನೆಯ ಹೊರಗೆ ಗುಂಡು ಹಾರಿಸುವುದು ಸೇರಿದಂತೆ ಹೈ ಪ್ರೊಫೈಲ್ ಘಟನೆಗಳಲ್ಲಿ ಆತನ ಹೆಸರು ಕಾಣಿಸಿಕೊಂಡಿದೆ. ಆತನನ್ನು ಭಾರತಕ್ಕೆ ಮರಳಿ ಕರೆತರಲು ಸಿದ್ಧತೆಗಳು ನಡೆಯುತ್ತಿವೆ.
ಹಿಮಾಂಶು ಭಾವು ಯಾರು?
ಹಿಮಾಂಶು ರಿಟೋಲಿ ಎಂದೂ ಕರೆಯಲ್ಪಡುವ ಭಾವು, 17 ನೇ ವಯಸ್ಸಿನಲ್ಲಿ ಅಪರಾಧ ಜಗತ್ತಿಗೆ ಪ್ರವೇಶಿಸಿದನೆಂದು ವರದಿಯಾಗಿದೆ. ಬಾಲ್ಯದಲ್ಲಿಯೇ ಆತನನ್ನು ಬಾಲಾಪರಾಧಿ ತಿದ್ದುಪಡಿ ಕೇಂದ್ರಕ್ಕೆ ಕಳುಹಿಸಲಾಗಿತ್ತು ಆದರೆ ನಂತರ ಸುಮಾರು 20 ಇತರ ಹುಡುಗರೊಂದಿಗೆ ಪರಾರಿಯಾಗಿದ್ದಾನೆ.
ಹರಿಯಾಣದಲ್ಲಿ ಮಾತ್ರ ಆತನ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಸುಲಿಗೆ ಆರೋಪಗಳನ್ನು ಒಳಗೊಂಡ ಸುಮಾರು 50 ಪ್ರಕರಣಗಳು ದಾಖಲಾಗಿವೆ. ದೆಹಲಿ ಪೊಲೀಸರು, ಹರಿಯಾಣ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೂಡ ಆತನ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ.
2022 ರಲ್ಲಿ, 24 ಗಂಟೆಗಳ ಒಳಗೆ ಹರಿಯಾಣದಲ್ಲಿ ಮೂರು ಕೊಲೆಗಳು ನಡೆದವು, ಮತ್ತು ಮೂರೂ ಹತ್ಯೆಗಳಿಗೆ ಭಾವು ಹೊಣೆ ಹೊತ್ತನು. ಎಲ್ವಿಶ್ ಯಾದವ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಜವಾಬ್ದಾರಿಯನ್ನು ಸಹ ಆತ ವಹಿಸಿಕೊಂಡನು. ಬರ್ಗರ್ ಕಿಂಗ್ ರೆಸ್ಟೋರೆಂಟ್ ನಲ್ಲಿ ನಡೆದ ಹತ್ಯೆ ಮತ್ತು ಹಲವಾರು ಜಿಮ್ ಮಾಲೀಕರ ಆವರಣದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆತನ ಹೆಸರು ಹೆಚ್ಚುವರಿಯಾಗಿ ಹೊರಹೊಮ್ಮಿದೆ, ಸುಲಿಗೆ ಹಣಕ್ಕಾಗಿ ಬೇಡಿಕೆ ಇಡಲಾಗಿದೆ ಎಂದು ಹೇಳಲಾಗಿದೆ.
ನೀರಜ್ ಫರೀದ್ ಪುರಿಯಾ ಯಾರು?
ನೀರಜ್ ಫರೀದ್ಪುರಿಯಾ ಹರಿಯಾಣದ ಪಲ್ವಾಲ್ ಜಿಲ್ಲೆಯ ಫರೀದ್ಪುರ್ ಗ್ರಾಮದ ನಿವಾಸಿ. ಭಾರತೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಆತನ ವಿರುದ್ಧ ದೆಹಲಿ, ಹರಿಯಾಣ ಮತ್ತು ಪಂಜಾಬ್ನಲ್ಲಿ 25 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಎಲ್ವಿಶ್ ಯಾದವ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಫರೀದ್ಪುರಿಯಾ ಹೆಸರು ಕೂಡ ಕೇಳಿಬಂದಿದೆ. ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದನೆಂಬ ಆರೋಪದ ನಂತರ ಅವನು ಬೆಳಕಿಗೆ ಬಂದನು.
ಫರಿದಾಬಾದ್ ನಲ್ಲಿರುವ ಬಿಜೆಪಿ ನಾಯಕ ವಿನೋದ್ ಭಾಟಿ ಅವರ ಕಚೇರಿಯಲ್ಲಿ, ಸುಲಿಗೆ ಹಣಕ್ಕಾಗಿ ಗುಂಡಿನ ದಾಳಿ ನಡೆಸಲು ವ್ಯವಸ್ಥೆ ಮಾಡಿದ ಆರೋಪವೂ ಅವನ ಮೇಲಿದೆ. ಹರಿಯಾಣದಲ್ಲಿ ನಡೆದ ಹಲವು ಪ್ರಮುಖ ಅಪರಾಧ ಪ್ರಕರಣಗಳೊಂದಿಗೆ ಅವನ ಹೆಸರು ತಳುಕುಹಾಕಿಕೊಂಡಿದೆ.
ಗ್ಯಾಂಗ್ ಗಳ ನಡುವಿನ ವೈಷಮ್ಯ ಮತ್ತು ವಿದೇಶಕ್ಕೆ ಪರಾರಿ
ಭಾವು, ನೀರಜ್ ಬವಾನಾ ಮತ್ತು ಬಂಬಿಹಾ ಗ್ಯಾಂಗ್ ಗಳೊಂದಿಗೆ ಗುರುತಿಸಿಕೊಂಡಿದ್ದನು. ಅವನ ಗ್ಯಾಂಗ್ ಗೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಗಳೊಂದಿಗೆ ದೀರ್ಘಕಾಲದ ವೈಷಮ್ಯವಿದೆ; ಭಾವು, ಬಿಷ್ಣೋಯ್ನ ವಿರೋಧಿಯಾಗಿದ್ದಾನೆ ಎಂದು ಹೇಳಲಾಗುತ್ತದೆ.
ಭಾರತದಿಂದ ಪರಾರಿಯಾದ ನಂತರ, ಭಾವು ಮೊದಲು ಪೋರ್ಚುಗಲ್ ಗೆ ಹೋಗಿ, ಅಲ್ಲಿಂದ ಅಮೆರಿಕಕ್ಕೆ ತೆರಳಿದನು. ಅಮೆರಿಕದಲ್ಲಿದ್ದುಕೊಂಡೇ ಅವನು ಭಾರತದಲ್ಲಿ ತನ್ನ ಗ್ಯಾಂಗ್ ನ ಚಟುವಟಿಕೆಗಳನ್ನು ಮುಂದುವರಿಸಿದ್ದನೆಂದು ಆರೋಪಿಸಲಾಗಿದೆ. 2023ರಲ್ಲಿ ಅವನ ವಿರುದ್ಧ ‘ಲುಕ್ ಔಟ್ ಸರ್ಕ್ಯುಲರ್’ (Look Out Circular) ಹೊರಡಿಸಲಾಯಿತು; ಅದೇ ವರ್ಷ ಇಂಟರ್ಪೋಲ್ (Interpol) ಅವನ ವಿರುದ್ಧ ‘ರೆಡ್ ಕಾರ್ನರ್ ನೋಟಿಸ್’ (Red Corner Notice) ಕೂಡ ಜಾರಿಗೊಳಿಸಿತ್ತು.
ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಫರಿದಪುರಿಯಾ ಕೂಡ ಅಮೆರಿಕದಲ್ಲಿ ವಾಸಿಸುತ್ತಿದ್ದನು. ಹರಿಯಾಣ ಎಸ್ಟಿಎಫ್ (STF) ನೀಡಿದ ಮಾಹಿತಿಯ ಆಧಾರದ ಮೇಲೆ, ಎಫ್ಬಿಐ (FBI) ಇವರಿಬ್ಬರನ್ನೂ ಒಟ್ಟಿಗೆ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಎದುರಿಸಲು ಭಾವುನನ್ನು ಭಾರತಕ್ಕೆ ಕರೆತರುವ ಸಿದ್ಧತೆಗಳು ನಡೆಯುತ್ತಿವೆ. ಇವರಿಬ್ಬರಿಗೆ ಸಂಬಂಧಿಸಿದ ಪ್ರಕ್ರಿಯೆಯ ಕುರಿತ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

