HomeKarnatakaವೀರರಾಣಿಯ ನೆಲದಲ್ಲಿ ಸಾಂಸ್ಕೃತಿಕ ವೈಭವ; ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ

ವೀರರಾಣಿಯ ನೆಲದಲ್ಲಿ ಸಾಂಸ್ಕೃತಿಕ ವೈಭವ; ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ

ಬೆಳಗಾವಿ: ಬ್ರಿಟೀಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವದ ಸ್ಮರಣಾರ್ಥ ಆಚರಿಸುವ ಕಿತ್ತೂರು ಉತ್ಸವವು ಶುಕ್ರವಾರ ಕಿತ್ತೂರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆರಂಭಗೊಂಡಿತು. ಚನ್ನಮ್ಮನ ಉತ್ಸವದ ಸಂಭ್ರಮ, ಐತಿಹಾಸಿಕ ಪರಂಪರೆಯನ್ನು ನೆನಪಿಸುವ ವಾತಾವರಣ ಕಿತ್ತೂರಿನಲ್ಲಿ ನಿರ್ಮಾಣವಾಯಿತು.

ರಾಜ್ಯದಾದ್ಯಂತ ಸಂಚರಿಸಿದ ವೀರ ಜ್ಯೋತಿಯನ್ನು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಜನಪ್ರತಿನಿಧಿಗಳು ಹಾಗೂ ಗಣ್ಯರು ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತಿತರರು ಹಾಜರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕರ್ಷಕ ಜಾನಪದ ಕಲಾವಾಹಿನಿಗಳ ಮೆರವಣಿಗೆ:

ಕಿತ್ತೂರು ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆಕರ್ಷಕ ಜಾನಪದ ಕಲಾವಾಹಿನಿಗೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಡೊಳ್ಳುಕುಣಿತ, ಪುರವಂತಿಕೆ, ಜಗ್ಗಲಗಿ, ಕರಡಿ‌ ಮಜಲು, ಸಂಬಳ ವಾದನ, ಹಲಗೆ ವಾದನ, ಹೆಜ್ಜೆ ಮೇಳ, ತಮಟೆ ವಾದನ, ಗೊಂಬೆ ಕುಣಿತ, ಬುಜಂಗ ಯಕ್ಷಗಾನ, ನಂದಿ ಧ್ವಜ, ಕಂಸಾಳೆ, ಚಂಡೆ ವಾದನ‌, ಕರ್ಬಲ ಕುಣಿತ, ನಾಸಿಕ ಡೋಲು, ದಟ್ಟಿ ಕುಣಿತ, ಕಣಿ ವಾದನ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಕ‌ ಮೆರವಣಿಗೆಗೆ ಮೆರಗು ನೀಡಿದವು.

ಜಾನಪದ‌ ಕಲಾವಾಹಿನಿಗಳ ಜೊತೆಗೆ ವಿವಿಧ ಇಲಾಖೆಗಳಿಂದ ನೀಡಲಾಗುವ ಸರ್ಕಾರದ‌ ಯೋಜನೆ, ಸೌಲಭ್ಯಗಳ  ಸ್ತಬ್ದ ಚಿತ್ರಗಳು ನೆರೆದ ಜನರ ಗಮನ‌ ಸೆಳೆದವು.

ವಿವಿಧ ವಸ್ತುಪ್ರದರ್ಶನ ಮಳಿಗೆ:

ಕೋಟೆ ಆವರಣದಲ್ಲಿ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮಳಿಗೆ, ಫಲಪುಷ್ಪ ಪ್ರದರ್ಶನವನ್ನು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ‌ ಕೌಜಲಗಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಇದ್ದರು.

ಕೃಷಿ, ಆರೋಗ್ಯ, ತೋಟಗಾರಿಕೆಗೆ ಸಂಬಂಧಿಸಿದಂತೆ 100 ವಸ್ತು ಪ್ರದರ್ಶನ ಮಳಿಗೆಗಳು ಹಾಗೂ 37 ವಿವಿಧ ಮಾದರಿಯ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಕಿತ್ತೂರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಉತ್ಸವದಲ್ಲಿ ಭಾಗಿಯಾಗಿದ್ದರು.

ಮೂರು ದಿನಗಳ ಅದ್ಧೂರಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಕಿತ್ತೂರಿನ ಚನ್ನಮ್ಮನ ಕೋಟೆಯ ಆವರಣದಲ್ಲಿ ಸಂಭ್ರಮ ಮನೆಮಾಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular