ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನೋತ್ಸವ ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿದ್ದು, ಹಾಸನಾಂಬೆ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಲಕ್ಷಾಂತರ ಭಕ್ತರಿಗೆ ಸುಗಮ ಮತ್ತು ಸುರಕ್ಷಿತ ದರ್ಶನ ಕಲ್ಪಿಸುವುದರ ಜತೆಗೆ, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಸಮಯವನ್ನು ಕಡಿಮೆ ಮಾಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಬಾರಿ ವಿವಿಐಪಿ ಹಾಗೂ ಸಾಮಾನ್ಯ ಜನರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ಬೆಳಗ್ಗೆ 10:30ರಿಂದ 12:30ರ ವರೆಗೆ ಮಾತ್ರ ವಿವಿಐಪಿ ದರ್ಶನ, ಇನ್ನುಳಿದ ಬಾಕಿ ಸಮಯದಲ್ಲಿ ಜನರಿಗೆ ಇಡೀ ದಿನ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಲಿಂಗೇಗೌಡ, ಅಕ್ಟೋಬರ್ 29ರಿಂದ ಹಾಸನಾಂಬೆ ಜಾತ್ರೆ ನಡೆಯುತ್ತಿದ್ದು, ಕಳೆದ ವರ್ಷ 25 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದರು. ಈಗಲೂ ವಿಜೃಂಭಣೆಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ದಸರಾದಂತೆ ಹಾಸನಾಂಬೆ ಜಾತ್ರೆ ಕಾರ್ಯಕ್ರಮ ನಡೆಯುತ್ತದೆ ಎಂದರು.
ಈ ಬಾರಿಯೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆ. ಬೆಳಗ್ಗೆ 10:30ರಿಂದ 12:30ರ ವರೆಗೆ ಮಾತ್ರ ವಿವಿಐಪಿ ದರ್ಶನಕ್ಕೆ ಅವಕಾಶವಿದೆ. ಇನ್ನುಳಿದ ಬಾಕಿ ಸಮಯದಲ್ಲಿ ಜನರಿಗೆ ಇಡೀ ದಿನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಬರಲಿಲ್ಲ ಅಂದ್ರೆ ಮತ್ತೆ ಮುಂದಿನ ದಿನ ಬರಬೇಕು. ಒಟ್ಟು 3500 ವಿವಿಐಪಿ ಜನರಿಗೆ ಹಾಸನಾಂಬೆ ದರ್ಶನ ಕ್ಕೆ ವ್ಯವಸ್ಥೆ ಮಾಡಿದ್ದೇವೆ. ಪಬ್ಲಿಕ್ 1000 ರೂಪಾಯಿ ಪಾಸ್ ಮಾಡಿದ್ದೇವೆ. ಪವಿತ್ರ ಹಾಸನಾಂಬೆ ಮಾಡಬೇಕು ಅಂತ ಇದ್ದೇವೆ. ಅದಕ್ಕಾಗಿ ಉಸ್ತುವಾರಿ ಸಚಿವ ಸ್ಥಾನದ ಅವಕಾಶ ಯಶಸ್ವಿ ಮಾಡಬೇಕು. ಹೀಗಾಗಿ ಹಗಲು ರಾತ್ರಿ 15 ದಿನದಿಂದ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಇನ್ನು ಹಾಸನಾಂಬೆ ದರ್ಶನೋತ್ಸವಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾಡಳಿತ ಆಹ್ವಾನ ನೀಡಿದೆ. ಇಂದು ಬೆಂಗಳೂರಿನಲ್ಲಿ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಾಟೇಲ್, ಹಾಸನ ಡಿಸಿ ಲತಾಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಅವರು ಸಿಎಂ ಡಿ.ಕೆ. ಶಿವಕುಮಾರ್ ಗೆ ಅಧಿಕೃತ ಆಹ್ವಾನ ನೀಡಿದರು.

