HomeIndia'ಡ್ರೈವಿಂಗ್ ಲೈಸೆನ್ಸ್' ಪಡೆಯುವುದು ಇನ್ಮುಂದೆ ಕಷ್ಟ? ಪರೀಕ್ಷೆಯಲ್ಲಿ ಶೇ.75 ಅಂಕ ಕಡ್ಡಾಯಕ್ಕೆ ಕೇಂದ್ರದ ಸಿದ್ಧತೆ!

‘ಡ್ರೈವಿಂಗ್ ಲೈಸೆನ್ಸ್’ ಪಡೆಯುವುದು ಇನ್ಮುಂದೆ ಕಷ್ಟ? ಪರೀಕ್ಷೆಯಲ್ಲಿ ಶೇ.75 ಅಂಕ ಕಡ್ಡಾಯಕ್ಕೆ ಕೇಂದ್ರದ ಸಿದ್ಧತೆ!

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಿದ್ಧತೆ ನಡೆಸುತ್ತಿರುವವರಿಗೆ ಮಹತ್ವದ ಸುದ್ದಿ! ಚಾಲನಾ ಪರೀಕ್ಷೆಯ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಪ್ರಸ್ತಾವನೆ ಮುಂದಿಟ್ಟಿದೆ ಎನ್ನಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬೇಕಾದ ಅಂಕಗಳನ್ನು ಶೇ.60ರಿಂದ ಶೇ.75ಕ್ಕೆ ಹೆಚ್ಚಿಸುವುದು, ಸುರಕ್ಷಿತ ಚಾಲನಾ ತರಬೇತಿಗೆ ಕನಿಷ್ಠ 30 ನಿಮಿಷ ನಿಗದಿಪಡಿಸುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಕರಡು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ. ಹಾಗಾದರೆ, ಈ ಹೊಸ ನಿಯಮಗಳೇನು? ಚಾಲಕರಿಗೆ ಇದರಿಂದ ಆಗುವ ಬದಲಾವಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಯೆಸ್, ದೇಶಾದ್ಯಂತ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸಾರಿಗೆ ಇಲಾಖೆ ನೀಡುವ ಡ್ರೈವಿಂಗ್ ಲೈಸೆನ್ಸ್‌ (Driving Licence) ಪಡೆಯುವ ಪ್ರಕ್ರಿಯೆ ಇನ್ನು ಮುಂದೆ ಮತ್ತಷ್ಟು ಕಠಿಣವಾಗುವ ಸಾಧ್ಯತೆಯಿದೆ.

ಈಗಾಗಲೇ ಶೈಕ್ಷಣಿಕ ಅರ್ಹತೆಗಳು ಹಾಗೂ ಇತರ ಕಾರಣಗಳಿಂದ ಕೆಲವರು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಾಗದೆ, ಲೈಸೆನ್ಸ್ ಇಲ್ಲದೆಯೇ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ರಸ್ತೆ ಅಪಘಾತಗಳ ಅಪಾಯವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡೆಸುವ ಪರೀಕ್ಷೆಯನ್ನು ಕಠಿಣಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಭವಿಷ್ಯದಲ್ಲಿ ಲೈಸೆನ್ಸ್ ಪಡೆಯುವುದು ಮತ್ತಷ್ಟು ಸವಾಲಿನ ಕೆಲಸವಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶೇ.75 ಅಂಕ ಕಡ್ಡಾಯ?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH), ಸುರಕ್ಷಿತ ಚಾಲನಾ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ ಅಂಕಗಳ ಪ್ರಮಾಣವನ್ನು ಶೇ.60ರಿಂದ ಶೇ.75ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಮುಂದಿಟ್ಟಿದೆ.

ಇದರ ಜೊತೆಗೆ, ಆಧಾರ್ ದೃಢೀಕರಣದ ಮೂಲಕ ಪಡೆಯಬಹುದಾದ ಕೆಲವು ಆನ್‌ಲೈನ್ ಡ್ರೈವಿಂಗ್ ಲೈಸೆನ್ಸ್ ಸೇವೆಗಳಿಗೆ ಶುಲ್ಕ ವಿನಾಯಿತಿ ನೀಡುವ ಪ್ರಸ್ತಾವನೆಯನ್ನೂ ಮಾಡಲಾಗಿದೆ.

ಚಾಲನಾ ಪರೀಕ್ಷೆಯ ಮೌಲ್ಯಮಾಪನವನ್ನು ಕಠಿಣಗೊಳಿಸುವುದು ಮತ್ತು ಚಾಲಕರ ಸುರಕ್ಷತೆಯನ್ನು ಹೆಚ್ಚಿಸುವುದು ಈ ಬದಲಾವಣೆಗಳ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷಿತ ಚಾಲನಾ ತರಬೇತಿ ಕನಿಷ್ಠ 30 ನಿಮಿಷ ಇರಬೇಕು

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಸಂಬಂಧಿಸಿದಂತೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.

ಅದರ ಪ್ರಮುಖ ಅಂಶಗಳು ಹೀಗಿವೆ:

  • ಉತ್ತೀರ್ಣ ಅಂಕಗಳ ಹೆಚ್ಚಳ: ಸುರಕ್ಷಿತ ಚಾಲನಾ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಅಂಕಗಳ ಪ್ರಮಾಣವನ್ನು ಶೇ.60ರಿಂದ ಶೇ.75ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ.

  • ತರಬೇತಿಯ ಅವಧಿ: ಸುರಕ್ಷಿತ ಚಾಲನಾ ಪಾಠ ಕನಿಷ್ಠ 30 ನಿಮಿಷಗಳ ಕಾಲ ನಡೆಯಬೇಕು ಎಂಬ ಪ್ರಸ್ತಾವನೆ ಇದೆ.

  • ಅರ್ಜಿ ವಿಲೇವಾರಿ: ಡ್ರೈವಿಂಗ್ ಲೈಸೆನ್ಸ್‌ನಲ್ಲಿನ ಹೆಸರು, ವಿಳಾಸ ಸೇರಿದಂತೆ ವಿವರಗಳ ಬದಲಾವಣೆಗೆ ಸಲ್ಲಿಸುವ ಅರ್ಜಿಗಳನ್ನು 15 ದಿನಗಳೊಳಗೆ ಅನುಮೋದಿಸಬೇಕು ಅಥವಾ ತಿರಸ್ಕರಿಸಬೇಕು. ತಿರಸ್ಕರಿಸಿದರೆ ಅದಕ್ಕೆ ಕಾರಣವನ್ನೂ ತಿಳಿಸಬೇಕು.

  • ಶುಲ್ಕ ವಿನಾಯಿತಿ: ಲೈಸೆನ್ಸ್‌ನಲ್ಲಿನ ಹೆಸರು, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ವಿಧಿಸುವ ಶುಲ್ಕವನ್ನು ತೆಗೆದುಹಾಕುವ ಪ್ರಸ್ತಾವನೆ ಇದೆ.

  • ದಾಖಲೆಗಳ ನಿಯಮ: ಗುರುತು, ವಯಸ್ಸು ಮತ್ತು ನಿವಾಸದ ಪುರಾವೆಯಾಗಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಇ-ಪಡಿತರ ಚೀಟಿ ಹಾಗೂ ಜನನ ಪ್ರಮಾಣಪತ್ರದಂತಹ ದಾಖಲೆಗಳನ್ನು ಸಲ್ಲಿಸುವ ಕುರಿತು ಕರಡು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

  • ಲೈಸೆನ್ಸ್ ಕಾರ್ಡ್ ರೂಪ: ಲೈಸೆನ್ಸಿಂಗ್ ಪ್ರಾಧಿಕಾರ ನೀಡುವ ಅಥವಾ ನವೀಕರಿಸುವ ಪ್ರತಿಯೊಂದು ಡ್ರೈವಿಂಗ್ ಲೈಸೆನ್ಸ್ ಅನ್ನು ಫಾರಂ 7ರ ಅಡಿಯಲ್ಲಿ ಲ್ಯಾಮಿನೇಟೆಡ್ ಅಥವಾ ಪಾಲಿವಿನೈಲ್ ಕ್ಲೋರೈಡ್ (PVC) ಕಾರ್ಡ್ ರೂಪದಲ್ಲಿ ನೀಡುವ ಪ್ರಸ್ತಾವನೆ ಇದೆ.

ಹೊಸ ನಿಯಮಗಳು ಯಾವಾಗ ಜಾರಿಗೆ ಬರಲಿವೆ?

ಈ ಬದಲಾವಣೆಗಳು ಪ್ರಸ್ತುತ ಪ್ರಸ್ತಾವಿತ ಕರಡು ತಿದ್ದುಪಡಿಗಳ ಭಾಗವಾಗಿವೆ. ಇವು ಅಧಿಕೃತವಾಗಿ ಅಂತಿಮಗೊಂಡು ಜಾರಿಗೆ ಬರುವವರೆಗೆ ಪ್ರಸ್ತುತ ನಿಯಮಗಳೇ ಅನ್ವಯಿಸುತ್ತವೆ.ಹೀಗಾಗಿ, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಯಸುವವರು ಹೊಸ ನಿಯಮಗಳ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular