ಹೈದರಾಬಾದ್: ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಆಚರಿಸುವ ಕಟ್ಟಿಗೆ ಬಡಿದಾಟ ಆಚರಣೆ ವೇಳೆ ಓರ್ವ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವಗರಗಟ್ಟು ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ ಕಟ್ಟಿಗೆ ಬಡಿದಾಟದ ಆಚರಣೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರತಿ ವರ್ಷ ವಿಜಯದಶಮಿ ಹಬ್ಬದ ಪ್ರಯುಕ್ತ ದೇವಗರಗಟ್ಟು ಗ್ರಾಮದಲ್ಲಿ ಬನ್ನಿ ಹಂಚುವ ಆಚರಣೆಯ ಭಾಗವಾಗಿ ಕಟ್ಟಿಗೆ ಬಡಿದಾಟ ನಡೆಯುತ್ತದೆ. ಈ ವರ್ಷ ಆಚರಣೆಯ ವೇಳೆ ಕಾಲ್ತುಳಿತ ಉಂಟಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಮೃತರನ್ನು ಪೋತುರಾಜು (32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ 18 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಲೂರು ಆಸ್ಪತ್ರೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ ನೂರಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತಕ್ಕೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕಟ್ಟಿಗೆಗಳಿಂದ ಹೊಡೆದಾಡುವಾಗ ಪರಿಸ್ಥಿತಿ ಕೈಮೀರಿ ಕಾಲ್ತುಳಿತಕ್ಕೆ ಕಾರಣವಾಯಿತು. ಈ ವೇಳೆ ದುರಂತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ದಗಟ್ಟಿ ತಡೆದ ಎಸ್ ಪಿ: ಪೊಲೀಸರು ಹಾಗೂ ಜನಪ್ರತಿನಿಧಿಗಳ ನಡುವೆ ಮಾತಿನಚಕಮಕಿ: ಹೈಡ್ರಾಮಾ
ಮೈಸೂರು: ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅಡ್ಡಗಟ್ಟಿ ತಡೆದಿದ್ದು, ಇದರಿಂದ ಸಚಿವರು, ಶಾಸಕರು ಪೊಲೀಸ್ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಘಟನೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ನಡೆದಿದೆ.
ಐತಿಹಾಸಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ‘ನಂದಿ ಧ್ವಜ ಪೂಜೆ’ ವೇಳೆ ಆಡಳಿತ ಪಕ್ಷದ ಸಚಿವರು ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಭದ್ರತೆಯ ಕಾರಣ ನೀಡಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಪೂಜೆಗೆ ತೆರಳದಂತೆ ಅಡ್ಡಗಟ್ಟಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೂ ಮುನ್ನ ಮುಖ್ಯಮಂತ್ರಿಗಳ ಜೊತೆ ಆಗಮಿಸುವ ಸಚಿವರು, ಶಾಸಕರು ಹಾಗೂ ಗಣ್ಯರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜರುಗುವ ಪವಿತ್ರ ನಂದಿ ಧ್ವಜ ಪೂಜೆ ಸಲ್ಲಿಸುವುದು ದಶಕಗಳಿಂದ ನಡೆದುಕೊಂಡು ಬಂದ ಸಂಪ್ರದಾಯ. ಆದರೆ, ಈ ಬಾರಿ ಸಿಎಂ ಜೊತೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮಾತ್ರ ನಂದಿ ಧ್ವಜ ಪೂಜೆಗೆ ಬಿಡಲಾಗಿದ್ದು, ಅವರೊಂದಿಗೆ ಬಂದಿದ್ದ ಮತ್ತಿತರ ಸಚಿವರು ಹಾಗೂ ಇತರೆ ಜನಪ್ರತಿನಿಧಿಗಳನ್ನು ಸ್ಥಳದಲ್ಲೇ ಎಸ್‌ಪಿ ರಿಷ್ಯಂತ್ ತಡೆದಿದ್ದಾರೆ.
ಶಿಷ್ಟಾಚಾರದ ಹೆಸರಿನಲ್ಲಿ ಮತ್ತು ಭದ್ರತೆಯ ನೆಪದಲ್ಲಿ ಏಕಾಏಕಿ ಪ್ರವೇಶ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಸ್ಥಳದಲ್ಲಿದ್ದ ಸಚಿವರು ಎಸ್‌ಪಿ ರಿಷ್ಯಂತ್ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ನಂದಿ ಕಂಬ ಪೂಜೆಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇನ್ನು ಇದೇ ವೇಳೆ ಭದ್ರತೆಯ ಕಾರಣ ನೀಡಿ ಹಿರಿಯ ಶಾಸಕರಾದ ತನ್ವೀರ್ ಸೇಠ್ ಹಾಗೂ ಶಾಸಕ ಶ್ರೀವತ್ಸ ಅವರನ್ನು ಕೂಡ ಪೊಲೀಸರು ಅಡ್ಡಗಟ್ಟಿದ್ದಾರೆ. ಇದರಿಂದಾಗಿ ತನ್ವೀರ್ ಸೇಠ್ ಅವರು ಕೆಲಕಾಲ ಹೊರಗಡೆಯೇ ನಿಲ್ಲಬೇಕಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಗಮನಿಸಿ, ತನ್ವೀರ್ ಸೇಠ್ ಅವರೊಂದಿಗೆ ಮಾತನಾಡಿ ಮನವೋಲಿಸಿ ಜತೆಯಲ್ಲಿಯೇ ಪೂಜೆಗೆ ಕರೆದುಕೊಂಡು ಹೋದರು. ಅಂತಿಮವಾಗಿ ಮೇಲಿನವರ ಸೂಚನೆ ಮತ್ತು ಸಿಎಂ ಸೂಚನೆಯ ಮೇರೆಗೆ ಅವರನ್ನು ಪೂಜೆಗೆ ಒಳಗೆ ಬಿಡಲಾಯಿತು. ಸ್ಥಳದಲ್ಲಿದ್ದ ಮೈಸೂರಿನ ಇತರೆ ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ ಧ್ರುವನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್, ತಿಮ್ಮಯ್ಯ ಅವರಿಗೆ ಒಳಗೆ ಪ್ರವೇಶ ಸಿಗದ ಕಾರಣ ದೂರದಿಂದಲೇ ನಂದಿ ಧ್ವಜ ಪೂಜೆ ವೀಕ್ಷಿಸಿದರು.

