ಬೆಳಗಾವಿ: ಅನೈತಿಕ ಸಂಬಂಧ ಶಂಕೆಯಿಂದ ಪತಿಯಿಂದಲೇ ಪತ್ನಿಯ ಬರ್ಬರ ಕೊಲೆ ನಡೆದಿದೆ. ಬೆಳಗಾವಿ ನಗರದ ಮುರಳೀಧರ ಕಾಲೋನಿಯಲ್ಲಿ ಘಟನೆ ನಡೆದಿದೆ.
ಕುಡುಗೋಲಿನಿಂದ ಕೊಚ್ಚಿ ಅಶ್ವಿನಿ(23) ಅವರನ್ನು ಪತಿ ವಿಠಲ್ ಹೆಗಡೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ವಿಠಲ್ ಹೆಗಡೆ ವಿಪರೀತ ಮದ್ಯವ್ಯಸನಿಯಾಗಿದ್ದ.
ಕುಡಿದು ಬಂದು ನಿತ್ಯವೂ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ಈ ಕಾರಣಕ್ಕೆ ದಂಪತಿ ನಡುವೆ ನಿರಂತರ ಗಲಾಟೆ ಆಗುತ್ತಿತ್ತು. ವಿಠಲ್ ಹೆಗಡೆ ತಂದೆ ರುದ್ರಪ್ಪ ಅನಾರೋಗ್ಯದಿಂದ ಬಳಲುತ್ತಿದ್ದು, ಮಾವನಿಗೆ ಊಟ ಮಾಡಿಸುತ್ತಿದ್ದಾಗಲೇ ಅಶ್ವಿನಿಯನ್ನು ಕೊಚ್ಚಿ ವಿಠಲ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಎಪಿಎಂಸಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆಹಾರದಲ್ಲಿ ವಿಷದ ಪುಡಿ ಬೆರೆಸಿ ಪತಿಯನ್ನೇ ಕೊಂದ ಪತ್ನಿ
ಮೈಸೂರು: ಅನೈತಿಕ ಸಂಬಂಧ ಬಯಲಾಗುವ ಆತಂಕದಿಂದ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಹುಣಸೂರು ತಾಲೂಕಿನ ವಿನೋಬಾ ಕಾಲೋನಿಯಲ್ಲಿ ನಡೆದಿದೆ.
ರಾಮಪ್ರಸಾದ್(35) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಪವಿತ್ರಾ ಮತ್ತು ಆಕೆಯ ಪ್ರಿಯಕರ ಅದೇ ಗ್ರಾಮದ ಸುನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ನಲ್ಲಿ ಹುಡುಕಾಡಿ ದತ್ತೂರಿ ಬೀಜದ ಪುಡಿಯ ಬಗ್ಗೆ ಮಾಹಿತಿ ಪಡೆದಿದ್ದ ಪವಿತ್ರಾ ಪ್ರಿಯಕರನೊಂದಿಗೆ ಸೇರಿ ಇಡ್ಲಿಯಲ್ಲಿ ವಿಷಕಾರಿ ಪುಡಿ ಬೆರೆಸಿ ತಿನ್ನಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
12 ವರ್ಷಗಳ ಹಿಂದೆ ಪವಿತ್ರಾ ಮತ್ತು ರಾಮಪ್ರಸಾದ್ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ರಾಮಪ್ರಸಾದ್ ಅವರ ಹತ್ತಿರದ ಸಂಬಂಧಿಯಾಗಿರುವ ಅವಿವಾಹಿತನಾಗಿದ್ದ ಸುನಿಲ್ ಪವಿತ್ರಾ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಪತಿ ಬದುಕಿದ್ದರೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಕೆ ರಾಮಪ್ರಸಾದ್ ಕೊಲೆ ಮಾಡಲು ಪವಿತ್ರಾ ಮತ್ತು ಸುನಿಲ್ ಸಂಚು ರೂಪಿಸಿದ್ದರು.
ಅಕ್ಟೋಬರ್ 16ರಂದು ಕುಡಿದು ಮನೆಗೆ ಬಂದಿದ್ದ ರಾಮಪ್ರಸಾದ್ ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದರು. ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಟೀ ಕುಡಿಯಲು ನಿಂತಿದ್ದವರ ಮೇಲೆ ಹರಿದ ಕಾರು: ನಾಲ್ವರು ಸ್ಥಳದಲ್ಲೇ ಸಾವು
ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಚಹಾ ಕುಡಿಯಲು ತೆರಳುತ್ತಿದ್ದ ನಾಲ್ವರು ಭವಾನಿ ಭಕ್ತರು ಸ್ಥಳದಲ್ಲೇ ಸಾವುಕಂಡಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭವಾನಿ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯಿಂದ ದುರ್ಗಾ ದೇವಾಲಯದ ದರ್ಶನಕ್ಕಾಗಿ ಹೊರಟಿದ್ದ ಭಕ್ತರ ಮೇಲೆ ಅತಿವೇಗವಾಗಿ ಬಂದ ಕಾರು ಹರಿದು ಈ ದುರ್ಘಟನೆ ಸಂಭವಿಸಿದೆ.
ಘಟನೆಯ ವಿವರ:
ವಿಜಯನಗರ ಜಿಲ್ಲೆಯ ಡೆಂಕಾಡದಿಂದ ಖಾಸಗಿ ಬಸ್ನಲ್ಲಿ ಭವಾನಿ ಭಕ್ತರು ವಿಜಯವಾಡದ ದುರ್ಗಾ ದೇವಾಲಯಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಕತ್ತಿಪುಡಿ ಮಂಡಲಮ್ ವ್ಯಾಪ್ತಿಯ ಕತ್ತಿಪುಡಿ ಸಮೀಪ ಬಸ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಬಸ್ ರಿಪೇರಿಗಾಗಿ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ.
ಬಸ್ ನಿಂತ ಬಳಿಕ, ಪ್ರಯಾಣಿಕರು ಹಾಗೂ ಭಕ್ತರು ಟೀ ಕುಡಿಯಲು ರಸ್ತೆ ಬದಿ ತೆರಳುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಸ್ಕಾರ್ಪಿಯೋ ಕಾರು ರಸ್ತೆ ಬದಿಯಲ್ಲಿದ್ದ ಭಕ್ತರ ಮೇಲೆ ಅತಿವೇಗವಾಗಿ ಹರಿದಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ನಾಲ್ವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

