HomeInternationalಸಾವು ಗೆದ್ದು ಬಂದ ಮುದ್ದು ಕಂದಮ್ಮ: ರಕ್ತ ಪರೀಕ್ಷೆ ವರದಿ ಬರುವ ಮುನ್ನವೇ ಸಾವು ಘೋಷಿಸಿದ್ದ...

ಸಾವು ಗೆದ್ದು ಬಂದ ಮುದ್ದು ಕಂದಮ್ಮ: ರಕ್ತ ಪರೀಕ್ಷೆ ವರದಿ ಬರುವ ಮುನ್ನವೇ ಸಾವು ಘೋಷಿಸಿದ್ದ ವೈದ್ಯ !

ಅಮೆರಿಕದ ಅರಿಜೋನಾ ರಾಜ್ಯದ ಗಿಲ್ಬರ್ಟ್ ನಗರದಲ್ಲಿ ವೈದ್ಯಕೀಯ ಕ್ಷೇತ್ರವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಮೃತಪಟ್ಟಿದ್ದಾನೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟು ಶವಾಗಾರಕ್ಕೆ ರವಾನೆಯಾಗಿದ್ದ ಹದಿನೆಂಟು ತಿಂಗಳ ಮಗುವೊಂದು ಐದು ಗಂಟೆಗಳ ನಂತರ ಜೀವಂತವಾಗಿ ಪತ್ತೆಯಾಗಿದೆ. ಈ ಘೋರ ನಿರ್ಲಕ್ಷ್ಯದ ವಿರುದ್ಧ ಪೋಲಿಸರು ವೈದ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದು, ಮಗುವಿನ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನ್ಸೆಂಟ್ ಲೊರೆಂಜೊ ಫಿಯೋರ್ಡಿಲಿನೋ ಎಂಬ ಹದಿನೆಂಟು ತಿಂಗಳ ಮಗು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಆಟವಾಡುತ್ತಿದ್ದಾಗ ಅಕಸ್ಮಾತ್ ಆಗಿ ಈಜುಕೊಳಕ್ಕೆ ಬಿದ್ದಿತ್ತು. ತಕ್ಷಣವೇ ಮಗುವನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡುತ್ತಾ ಮೆರ್ಸಿ ಗಿಲ್ಬರ್ಟ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪಿದ ಕೇವಲ ಹದಿನಾರೇ ನಿಮಿಷಗಳಲ್ಲಿ, ವೈದ್ಯರು ಮಗು ಮೃತಪಟ್ಟಿದೆ ಎಂದು ಅಧಿಕೃತವಾಗಿ ಘೋಷಿಸಿ ಶವವನ್ನು ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದರು.

ಆದರೆ ಮಗು ಮೃತಪಟ್ಟಿದೆ ಎಂದು ಭಾವಿಸಿ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಐದು ಗಂಟೆಗಳ ನಂತರ ಆಸ್ಪತ್ರೆಯಿಂದ ಬಂದ ಕರೆ ಆಶ್ಚರ್ಯ ಮತ್ತು ಆಘಾತವನ್ನು ಉಂಟುಮಾಡಿದೆ. ಶವಾಗಾರದಲ್ಲಿದ್ದ ಮಗುವಿನಲ್ಲಿ ಜೀವಂತಿಕೆಯ ಕುರುಹುಗಳು ಕಂಡುಬಂದಿದ್ದು, ಮಗು ಉಸಿರಾಡುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣವೇ ಮಗುವನ್ನು ಹೊರತೆಗೆದು ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯ ಕುರಿತು ಪೋಲೀಸರು ನಡೆಸಿದ ತನಿಖೆಯಲ್ಲಿ ವೈದ್ಯರ ಕಡೆಯಿಂದ ಅತ್ಯಂತ ಗಂಭೀರ ಸ್ವರೂಪದ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಮಗುವಿನ ರಕ್ತದ ಮಾದರಿಯ ತಪಾಸಣಾ ವರದಿ ಬರುವ ಮುನ್ನವೇ ವೈದ್ಯರು ಸಾವು ಘೋಷಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ರಕ್ತದ ವರದಿ ಬರುವುದು ತಡವಾಗಿದ್ದರೂ, ಅದನ್ನು ಕಾಯದೆ ವೈದ್ಯರು ಮಗು ತೀರಿಕೊಂಡಿದೆ ಎಂದು ಆತುರದ ನಿರ್ಧಾರಕ್ಕೆ ಬಂದಿದ್ದರು.

ಸದ್ಯ ಮಗು ಜೀವಂತವಾಗಿದ್ದರೂ, ನೀರಿನಲ್ಲಿ ಮುಳುಗಿದ್ದರಿಂದ ಹಾಗೂ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಶವಾಗಾರದಲ್ಲಿ ಹಲವು ಗಂಟೆಗಳ ಕಾಲ ಇದ್ದಿದ್ದರಿಂದ ಮಗುವಿನ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಮಗುವಿಗೆ ಜೀವಮಾನವಿಡೀ ವಿಶೇಷ ಆರೈಕೆಯ ಅಗತ್ಯವಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಪೋಲೀಸ್ ಇಲಾಖೆಯು ಅರಿಜೋನಾ ಅಟಾರ್ನಿ ಜನರಲ್ ಕಚೇರಿಗೆ ಮನವಿ ಸಲ್ಲಿಸಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದೆ. ಮಗುವಿನ ಪೋಷಕರು ಕೂಡ ಆಸ್ಪತ್ರೆ ಮತ್ತು ಸಂಬಂಧಪಟ್ಟ ವೈದ್ಯರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಭವಿಸಿದ ಈ ಘಟನೆ ಇಡೀ ಜಗತ್ತಿನ ಗಮನ ಸೆಳೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular