HomeKarnataka34 ವರ್ಷ ಸುಧೀರ್ಘ ಸೇವೆ ಸಲ್ಲಿಸಿದರೂ ಸಿಗದ ಪಿಂಚಣಿ: ನಿವೃತ್ತ ದಿನಗೂಲಿ ನೌಕರನಿಗೆ ಪೂರ್ಣಸೇವೆಯ ಪಿಂಚಣಿಗೆ...

34 ವರ್ಷ ಸುಧೀರ್ಘ ಸೇವೆ ಸಲ್ಲಿಸಿದರೂ ಸಿಗದ ಪಿಂಚಣಿ: ನಿವೃತ್ತ ದಿನಗೂಲಿ ನೌಕರನಿಗೆ ಪೂರ್ಣಸೇವೆಯ ಪಿಂಚಣಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ಮೂರು ದಶಕ ಸೇವೆ ಸಲ್ಲಿಸಿದ ದಿನಗೂಲಿ ನೌಕರರ ಸೇವೆ ಕಾಯಂ ಮಾಡಲೇಬೇಕು, ನಿವೃತ್ತಿ ಕಾರಣ ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರ ಸೇವೆಯನ್ನು ಕಾಯಂಗೊಳಿಸಬೇಕು. ನಿವೃತ್ತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರ ಕಾಯಂ ಕೋರಿಕೆಯನ್ನು ತಿರಸ್ಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಂಡೇಲಿ ನಗರಸಭೆಯಲ್ಲಿ ಗೀತಾರಾಮಪ್ಪ ತೇರದಾಳ ಎಂಬುವವರು 1988 ರಿಂದ 2022 ರವರೆಗೆ ಅಂದರೆ ಸುಮಾರು 34 ವರ್ಷಗಳ ಕಾಲ ಬೆರಳಚ್ಚುಗಾರರಾಗಿ (ಟೈಪಿಸ್ಟ್) ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸಿದ್ದರು. 34 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದರೂ ಅವರ ಸೇವೆಯನ್ನು ಕಾಯಂಗೊಳಿಸದೆ, ಪಿಂಚಣಿ, ಗ್ರಾಚುಟಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯಗಳನ್ನು ನೀಡದೆ ನಗರಸಭೆ ನಿವೃತ್ತಿಗೊಳಿಸಿತ್ತು.

 ಇದನ್ನು ಪ್ರಶ್ನಿಸಿ ಗೀತಾರಾಮಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.

ನ್ಯಾಯಪೀಠ ಹೇಳಿದ್ದೇನು?

ವಿಚಾರಣೆ ವೇಳೆ ನ್ಯಾಯಪೀಠ ಕೆಲವು ಕಟು ಶಬ್ದಗಳಲ್ಲಿ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿದೆ.

– “ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರಿಂದ ಶಾಶ್ವತ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.”

– “ಸರ್ಕಾರದ ವ್ಯವಸ್ಥೆಯಲ್ಲೇ ಮೂರು ದಶಕಗಳ ಕಾಲ ದುಡಿಸಿಕೊಂಡು, ಕೊನೆಗೆ ನಿವೃತ್ತಿಯ ಹೊತ್ತಿನಲ್ಲಿ ಕಾಯಂಗೊಳಿಸಲು ನಿರಾಕರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದು ಶೋಷಣೆಗೆ ಸಮಾನವಾಗಿದೆ.”

– “ಈ ನಡೆ ಮಾದರಿ ಸರ್ಕಾರ (Model Employer) ದ ಲಕ್ಷಣವಲ್ಲ.”

– “ನೌಕರ ನಿವೃತ್ತರಾಗಿದ್ದಾರೆ ಎನ್ನುವ ಕಾರಣಕ್ಕೆ ಆತನ ಸೇವಾ ಅವಧಿಯಲ್ಲಿ ಸೃಷ್ಟಿಯಾದ ನ್ಯಾಯಸಮ್ಮತ ಹಕ್ಕು ಅಥವಾ ಕಾಯಂ ಮಾಡುವ ಕೋರಿಕೆ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಹೈಕೋರ್ಟ್ ಆದೇಶದ ಪ್ರಮುಖ ಅಂಶಗಳು:

ಅರ್ಜಿದಾರರ ಸೇವೆಯನ್ನು ಅವರು 10 ವರ್ಷ ಸೇವೆಯನ್ನು ಪೂರ್ಣಗೊಳಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕಾಯಂಗೊಳಿಸಬೇಕು.

 ಅವರ ಒಟ್ಟು 34 ವರ್ಷಗಳ ಸಂಪೂರ್ಣ ಸೇವೆಯನ್ನು ಪರಿಗಣಿಸಿ ಪಿಂಚಣಿ, ಗ್ರಾಜುಟಿ ಮತ್ತು ಇತರ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಲೆಕ್ಕ ಹಾಕಬೇಕು.

ಈ ಎಲ್ಲಾ ಪ್ರಕ್ರಿಯೆಯನ್ನು ಮುಂದಿನ 8 ವಾರಗಳೊಳಗೆ ಪೂರ್ಣಗೊಳಿಸಿ ಆದೇಶ ಹೊರಡಿಸಬೇಕು.

ಒಂದು ವೇಳೆ 8 ವಾರದೊಳಗೆ ಆದೇಶ ಪಾಲನೆಯಲ್ಲಿ ವಿಫಲವಾದರೆ, ಅರ್ಜಿದಾರರಿಗೆ ನೀಡಬೇಕಾದ ವೇತನದ ಬಾಕಿ ಮೊತ್ತಕ್ಕೆ ಶೇಕಡಾ 50 ರಷ್ಟು ಬಡ್ಡಿಯನ್ನು ಸರ್ಕಾರವೇ ಪಾವತಿಸಬೇಕು.

ಈ ತೀರ್ಪು ಕೇವಲ ಗೀತಾರಾಮಪ್ಪ ಅವರಿಗೆ ಮಾತ್ರವಲ್ಲದೆ, ರಾಜ್ಯಾದ್ಯಂತ ಇದೇ ರೀತಿ ಹಲವು ದಶಕಗಳಿಂದ ದಿನಗೂಲಿ, ತಾತ್ಕಾಲಿಕ, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಾವಿರಾರು ನೌಕರರಿಗೆ ದೊಡ್ಡ ಆಶಾಕಿರಣವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular