ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್. ಜಿಲ್ಲೆಯಲ್ಲಿ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಹಿಂದೆ ಅಕ್ಟೋಬರ್ 3 ರಿಂದ 21 ರವರೆಗೆ ದಸರಾ ರಜೆ ಘೋಷಿಸಲಾಗಿತ್ತು. ಆದರೆ ಪೋಷಕರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಮನವಿ ಮೇರೆಗೆ ರಜೆಯನ್ನು ಅಕ್ಟೋಬರ್ 22 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇಂದು (ಅ.22) ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (1 ರಿಂದ 10ನೇ ತರಗತಿ) ರಜೆ ಇರಲಿದ್ದು, ಅಕ್ಟೋಬರ್ 23 ರಂದು ಶಾಲೆಗಳು ಪುನರಾರಂಭವಾಗಲಿವೆ.
ರಜೆ ವಿಸ್ತರಣೆಗೆ ಕಾರಣವೇನು?
ದಸರಾ ಹಬ್ಬದ ಕೊನೆಯ ದಿನದ ಪೂಜೆ ಮತ್ತು ಮಂಗಳೂರು ದಸರಾದ ವೈಭವದ ಶೋಭಾಯಾತ್ರೆ ಅ.21 ರ ರಾತ್ರಿ ತಡವರೆಗೆ ನಡೆಯುತ್ತದೆ. ಇದರಲ್ಲಿ ಅಪಾರ ಸಂಖ್ಯೆಯ ಮಕ್ಕಳು ಮತ್ತು ಪೋಷಕರು ಭಾಗವಹಿಸುತ್ತಾರೆ. ಜೊತೆಗೆ ದೂರದ ಊರುಗಳಿಗೆ ಹೋಗಿರುವ ಕುಟುಂಬಗಳು ವಾಪಸ್ ಬರಲು ತಡವಾಗುತ್ತದೆ ಎಂಬ ಕಾರಣಕ್ಕೆ ರಜೆ ವಿಸ್ತರಿಸುವಂತೆ ಮನವಿ ಬಂದಿತ್ತು. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.
ಹೆಚ್ಚುವರಿ ಒಂದು ದಿನದ ರಜೆಯಿಂದ ಪಠ್ಯ ಬೋಧನೆಗೆ ತೊಂದರೆಯಾಗದಂತೆ, ಮುಖ್ಯ ಶಿಕ್ಷಕರಿಗೆ ಇರುವ 4 ಸ್ಥಳೀಯ ರಜೆಗಳಲ್ಲಿ ಒಂದು ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಬ್ಯಾಂಕ್ ಗ್ರಾಹಕರಿಗೆ SBI ನಿಂದ ಮಹತ್ವದ ಸೂಚನೆ
ಬೆಂಗಳೂರು: ಗ್ರಾಹಕರಿಗೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್ ಬ್ಯಾಂಕ್(SBI) ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಇತ್ತೀಚೆಗೆ ಸಂಭವಿಸಿದ ಸೈಬರ್ ಘಟನೆಗೆ ಸಂಬಂಧಿಸಿದಂತೆ, ದತ್ತಾಂಶ ಸೋರಿಕೆಯು ಅತ್ಯಂತ ಕಡಿಮೆ ಸಂಖ್ಯೆಯ ಗ್ರಾಹಕರ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಲು ಬಯಸುತ್ತೇವೆ. ಈ ಘಟನೆಯಿಂದ ಬ್ಯಾಂಕಿನ ಮಾಹಿತಿ ತಂತ್ರಜ್ಞಾನ (IT) ಮತ್ತು ಕೋರ್ ಬ್ಯಾಂಕಿಂಗ್ ಕಾರ್ಯಾಚರಣೆಗಳು, ಹಣಕಾಸಿನ ಕಾರ್ಯಕ್ಷಮತೆ ಅಥವಾ ವ್ಯವಹಾರದ ನಿರಂತರತೆಯ ಮೇಲೆ ಯಾವುದೇ ಗಮನಾರ್ಹ ಪರಿಣಾಮ ಉಂಟಾಗಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ.
ಗ್ರಾಹಕರ ಖಾತೆಗಳಲ್ಲಿನ ಬ್ಯಾಲೆನ್ಸ್ ಗಳು ಸಂಪೂರ್ಣ ಸುರಕ್ಷಿತವಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ.
ಗ್ರಾಹಕರ ಹಣಕಾಸಿನ ಆಸ್ತಿಗಳು, ದತ್ತಾಂಶ ಮತ್ತು ನಮ್ಮ ಮೇಲಿನ ಅವರ ನಂಬಿಕೆಯನ್ನು ಸುರಕ್ಷಿತವಾಗಿರಿಸುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಬೆಂಗಳೂರು ವೃತ್ತ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರ ಬ್ಯಾಂಕ್ ಖಾತೆಗಳು ಮತ್ತು ವಹಿವಾಟುಗಳ ಸುರಕ್ಷತೆಯನ್ನು ಕಾಪಾಡುವುದು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಸುಧಾರಿಸುವುದು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದು ಬ್ಯಾಂಕಿನ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಲಾಗಿದೆ.
ಎಸ್‌ಬಿಐ ಬೆಂಗಳೂರು ವೃತ್ತದ ಪರವಾಗಿ ನೀಡಿರುವ ಸಂದೇಶದಲ್ಲಿ, ಬ್ಯಾಂಕಿನೊಂದಿಗೆ ಸಂಬಂಧ ಹೊಂದಿರುವ ಗ್ರಾಹಕರು ತಮ್ಮ ಖಾತೆಗಳ ಸುರಕ್ಷತೆ ಮತ್ತು ಬ್ಯಾಂಕಿಂಗ್ ಸೇವೆಗಳ ಬಳಕೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಲಾಗಿದೆ.

