ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಅಂಕಿತ್ ಎಂದು ಗುರುತಿಸಲಾದ ಈ ವ್ಯಕ್ತಿಯನ್ನು, ಈ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಗುಜರಾತ್ ನ ಬರೋಡಾದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಹರಿಯಾಣದ ಗೋಹಾನಾದ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಮುಂಬೈಗೆ ಕರೆತರಲು ಮುಂಬೈ ಪೊಲೀಸರು ‘ಟ್ರಾನ್ಸಿಟ್ ರಿಮಾಂಡ್ (ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಅನುಮತಿ) ಪಡೆದುಕೊಂಡಿದ್ದಾರೆ. ಗೋಹಾನಾ ಪೊಲೀಸರು ಮತ್ತು ಮುಂಬೈ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಅಂಕಿತನ ಸಂಪರ್ಕವಿರುವ ಶಂಕೆ
ಮಾಹಿತಿಯ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆಪ್ತ ಸಹಾಯಕನೆಂದು ಗುರುತಿಸಲ್ಪಟ್ಟ ಅನಿಲ್ ಪಂಡಿತ್ ಎಂಬಾತನೊಂದಿಗೆ ಅಂಕಿತ ಸಂಪರ್ಕದಲ್ಲಿದ್ದನೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಗುಂಡಿನ ದಾಳಿಯ ಹಿಂದಿನ ಸಂಚಿನಲ್ಲಿ ಈತ ಭಾಗಿಯಾಗಿದ್ದನೆಂದು ಆರೋಪಿಸಲಾಗಿದೆ.
ಅಂಕಿತ, ನೇಪಾಳ ಮತ್ತು ಅನಿಲ್ ಪಂಡಿತ್ ನಡುವೆ ಹಣಕಾಸಿನ ವಹಿವಾಟು ನಡೆದಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿದೆ. ಈ ವಹಿವಾಟುಗಳು ಯಾಕೆ ಮತ್ತು ಯಾವ ಉದ್ದೇಶಕ್ಕಾಗಿ ನಡೆದಿವೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಈ ಜಾಲದೊಂದಿಗೆ ಅಂಕಿತನಿಗಿರುವ ಸಂಪರ್ಕಗಳು ಮತ್ತು ಈ ಪಿತೂರಿಯಲ್ಲಿ ಆತನ ಪಾತ್ರದ ಬಗ್ಗೆ ಮುಂಬೈ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.
ಕೋಟಾದಿಂದ ಮುಂಬೈಗೆ ಕರೆತರಲಾದ ಮೂವರು ಪ್ರಮುಖ ಆರೋಪಿಗಳು
ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಾದಲ್ಲಿ ಬಂಧಿಸಲಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬುಧವಾರ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅವರನ್ನು ರಸ್ತೆ ಮಾರ್ಗವಾಗಿ ಕೋಟಾದಿಂದ ಮುಂಬೈಗೆ ಕರೆತಂದರು. ಮುಂಬೈಗೆ ತಲುಪಿದ ಕೂಡಲೇ, ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಜಿ.ಟಿ. ಆಸ್ಪತ್ರೆಗೆ (GT Hospital) ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ನಂತರ, ವಿಚಾರಣೆಗಾಗಿ ಆರೋಪಿಗಳನ್ನು ಮುಂಬೈ ಅಪರಾಧ ವಿಭಾಗದ (Mumbai Crime Branch) ಸುಲಿಗೆ ವಿರೋಧಿ ಘಟಕದ (Anti-Extortion Cell – AEC) ಕಚೇರಿಗೆ ಕರೆದೊಯ್ಯಲಾಯಿತು. ಬಂಧಿತರನ್ನು ಹರಿಯಾಣದ ಸೋನಿಪತ್‌ನ ರೆಹಾನ್ ಅಲಿಯಾಸ್ ಸುಕ್ಕಾ; ಬಿಹಾರದ ಬೆಗುಸರಾಯ್ ಮೂಲದವರಾಗಿದ್ದು ಮುಂಬೈನಲ್ಲಿ ವಾಸಿಸುತ್ತಿರುವ ರಿತಿಕ್ ಕುರ್ಮಿ ಅಲಿಯಾಸ್ ರೋಷನ್; ಹಾಗೂ ಹರಿಯಾಣದ ಫೂಲ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೋಟಾ ನಗರ ಪೊಲೀಸರು ಇವರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮುಂಬೈ ಪೊಲೀಸರು ಇವರನ್ನು ಅಧಿಕೃತವಾಗಿ ಬಂಧಿಸಿ, ಅಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಅವರನ್ನು ಮುಂಬೈಗೆ ಕರೆತರಲು ನ್ಯಾಯಾಲಯವು ‘ಟ್ರಾನ್ಸಿಟ್ ರಿಮಾಂಡ್’ ಮಂಜೂರು ಮಾಡಿತ್ತು. ಇದೇ ವೇಳೆ, ಬುಧವಾರ ಬೆಳಿಗ್ಗೆ ಮುಂಬೈನ ಎಇಸಿ (AEC) ಕಚೇರಿಗೆ ಆಗಮಿಸಿದ ವಕೀಲ ಅಜಿಂಕ್ಯ ಮಿರ್ಗಾಲ್, ಈ ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರಾಗಿ (ಡಿಫೆನ್ಸ್ ಕೌನ್ಸೆಲ್) ಹಾಜರಾಗುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ, ಕನಿಷ್ಠ ಇಬ್ಬರು ವ್ಯಕ್ತಿಗಳು ಶ್ರಾಫ್ ಅವರ ಕಾರಿನತ್ತ ಗುಂಡು ಹಾರಿಸಿ, ನಂತರ ಮೋಟಾರ್‌ಸೈಕಲ್‌ನಲ್ಲಿ ವೇಗವಾಗಿ ಪರಾರಿಯಾದರು. ಈ ಘಟನೆಯಲ್ಲಿ ನಟ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾದರು, ಆದರೆ ಅವರ ಚಾಲಕ ಮತ್ತು ಅಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡರು.

