ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ ಘಟನೆ ಆತಂಕ ಸೃಷ್ಟಿಸಿದೆ. ಸಾವಿರಾರು ಜನರು ನೆರೆದಿದ್ದ ಸಂದರ್ಭದಲ್ಲಿ ಆನೆ ನಿಯಂತ್ರಣ ತಪ್ಪಿ ಓಡಿದ್ದರಿಂದ ಜನರು ಭಯಭೀತರಾದರು. ಘಟನೆಯಿಂದಾಗಿ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ.
ಜನಸಂದಣಿ ಕಂಡು ಗಲಿಬಿಲಿಗೊಂಡ ಆನೆ
ಮೈಸೂರು ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಂಬೂಸವಾರಿ ಮೆರವಣಿಗೆಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಸಾಗರ, ಬಹದ್ದೂರ್ ಮತ್ತು ಸೋಮಣ್ಣ ಆನೆಗಳನ್ನು ಕರೆತರಲಾಗಿತ್ತು.
ಮೆರವಣಿಗೆಯಲ್ಲಿ ಸೋಮಣ್ಣ ಆನೆಯ ಮೇಲೆ ಬೆಳ್ಳಿಯ ಅಂಬಾರಿಯನ್ನು ಕಟ್ಟಿ ಸಿದ್ಧತೆ ಮಾಡಲಾಗಿತ್ತು. ಕೋಟೆ ಆಂಜನೇಯ ದೇವಸ್ಥಾನದ ಕಡೆಯಿಂದ ಮೆರವಣಿಗೆ ಸಾಗುತ್ತಿದ್ದ ವೇಳೆ, ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಮಾವುತನ ನಿಯಂತ್ರಣ ತಪ್ಪಿ ಓಡಲಾರಂಭಿಸಿದೆ.
ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಕಂಡು ಆನೆ ಗಲಿಬಿಲಿಗೊಂಡು ಈ ರೀತಿ ವರ್ತಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಆನೆ ನಿಯಂತ್ರಣ ತಪ್ಪಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದು ಹಾನಿ
ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತಂಕಕ್ಕೊಳಗಾದರು. ಆನೆಯ ಮೇಲಿದ್ದ ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದು ಹಾನಿಯಾಗಿದೆ. ಆನೆ ನಿಯಂತ್ರಣ ತಪ್ಪಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಗಳ ಆರೈಕೆ ತಂಡದವರು ಅದನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಅರಣ್ಯ ಅಧಿಕಾರಿಗಳು ಅರವಳಿಕೆ ಔಷಧ ನೀಡಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಜಂಬೂಸವಾರಿ ಮೆರವಣಿಗೆ ರದ್ದು
ಈ ಅಚಾತುರ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ. ಸಂಭ್ರಮದಿಂದ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರಲ್ಲಿ ಘಟನೆ ಆತಂಕ ಮೂಡಿಸಿದೆ.
ಮೈಸೂರು ದಸರಾ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಅದ್ಧೂರಿಯಾಗಿ ಜಂಬೂಸವಾರಿ ನಡೆಸಲು ಸಿದ್ಧತೆ ಮಾಡಲಾಗಿತ್ತು. ಆದರೆ, ಅಂಬಾರಿ ಹೊತ್ತ ಆನೆ ನಿಯಂತ್ರಣ ತಪ್ಪಿದ ಪರಿಣಾಮ ಮೆರವಣಿಗೆ ಅರ್ಧದಲ್ಲೇ ಮೊಟಕುಗೊಂಡಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೆರವಣಿಗೆಯನ್ನು ರದ್ದುಗೊಳಿಸಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಂಜಾ ಮಾರಾಟ: ಐವರು ಆರೋಪಿಗಳ ಬಂಧನ
ಶಿವಮೊಗ್ಗ: ನಗರದ ಹೊರವಲಯದ ಶಿವಮೊಗ್ಗ–ಹಾಳೂರು ಅನುಪಿನಕಟ್ಟೆ ಮುಖ್ಯ ರಸ್ತೆಯ ತುಂಗಾ ಮೇಲ್ದಂಡೆ ಕಾಲುವೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಯುವಕರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹61,500 ಮೌಲ್ಯದ 1 ಕೆ.ಜಿ. 230 ಗ್ರಾಂ ಗಾಂಜಾ ಹಾಗೂ ಮಾರಾಟದಿಂದ ಬಂದಿದ್ದ ₹400 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
2026ರ ಅಕ್ಟೋಬರ್ 15ರಂದು ತುಂಗಾ ಮೇಲ್ದಂಡೆ ಕಾಲುವೆ ಸಮೀಪ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಘುವೀರ್ ಎಂ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿರುವ ಆರೋಪದ ಮೇಲೆ ಐವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಂಧಿತ ಆರೋಪಿಗಳ ವಿವರ
ವಸೀಂ ಅಕ್ರಮ್(24), ನದೀಮ್ ಅಲಿಯಾಸ್ ನದ್ದು(21), ನಾಸೀರ್ ಶೇಖ್(20), ಹರ್ಷದ್ ವುಲ್ಲಾ ಅಲಿಯಾಸ್ ಅದ್ದು(21), ಶಾಹೀದ್ ಖಾನ್ ಅಲಿಯಾಸ್ ಭಾಷಾ ಖಾನ್(26) ಬಂಧಿತ ಆರೋಪಿಗಳಾಗಿದ್ದಾರೆ.
ಗಾಂಜಾ, ನಗದು ಹಣ ವಶಕ್ಕೆ
ಬಂಧಿತ ಆರೋಪಿಗಳಿಂದ ಒಟ್ಟು 1 ಕೆ.ಜಿ. 230 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ₹61,500 ಎಂದು ಅಂದಾಜಿಸಲಾಗಿದೆ. ಜೊತೆಗೆ ಗಾಂಜಾ ಮಾರಾಟದಿಂದ ಬಂದಿದ್ದ ₹400 ನಗದು ಹಣವನ್ನೂ ಅಮಾನತ್ತುಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0670/2026ರ ಅಡಿಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

