HomeIndia13 ಅಂತಸ್ತಿನ ಅಪಾರ್ಟ್​ಮೆಂಟ್​ನಲ್ಲಿ ಭೀಕರ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ 9 ಜನರಿಗೆ...

13 ಅಂತಸ್ತಿನ ಅಪಾರ್ಟ್​ಮೆಂಟ್​ನಲ್ಲಿ ಭೀಕರ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ 9 ಜನರಿಗೆ ಗಂಭೀರ ಗಾಯ

ಮುಂಬೈ: ನವರಾತ್ರಿ ಹಬ್ಬದ ಸಂದರ್ಭದಲ್ಲಿಯೇ 13 ಅಂತಸ್ತಿನ ಅಪಾರ್ಟ್​ಮೆಂಟ್​ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿರುವ ಘಟನೆ ಮುಂಬೈನ ಕುರ್ಲಾ ಪಶ್ಚಿಮ ಭಾಗದಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುರ್ಲಾದ ಕೊಹಿನೂರ್ ಎಚ್‌ಡಿಐಎಲ್ ಕಟ್ಟಡ ಸಂಖ್ಯೆ 5 ರಲ್ಲಿ ಬೆಳಗ್ಗೆ 6.53 ರ ಸುಮಾರಿಗೆ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೋಡ ನೋಡುತ್ತಿದ್ದಂತೆ ಬೆಂಕಿ ವೈರಿಂಗ್ ಮೂಲಕ ಕಟ್ಟಡದ ತುಂಬಾ ವ್ಯಾಪಿಸಿದ್ದು, ಧಧಗನೆ ಹೊತ್ತಿ ಉರಿದಿದೆ. ಇದರಿಂದ ಇಡೀ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಪರಿಣಾಮ ಎಂಟು ನಿವಾಸಿಗಳು ಉಸಿರುಗಟ್ಟುವಿಕೆಗೆ ಒಳಗಾಗಿದ್ದಾರೆ. ಹಲವು ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯಿಂದ ಗಾಯಗೊಂಡವರಲ್ಲಿ ಐದು ವರ್ಷದ ಬಾಲಕ, ಇಬ್ಬರು ಹದಿಹರೆಯದ ಬಾಲಕಿಯರು ಹಾಗೂ ಒಬ್ಬ ಹಿರಿಯ ನಾಗರಿಕ ಸೇರಿದ್ದಾರೆ. ತಕ್ಷಣವೇ ಎಲ್ಲರನ್ನೂ ಘಾಟ್‌ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, 108 ಆಂಬ್ಯುಲೆನ್ಸ್ ಹಾಗೂ ಸ್ಥಳೀಯ ವಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಳಗ್ಗೆ 7.21 ರ ಹೊತ್ತಿಗೆ, ಅಂದರೆ ಕೇವಲ ಅರ್ಧ ಗಂಟೆಯಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಕಟ್ಟಡದ ಸುರಕ್ಷತಾ ಕ್ರಮಗಳು ಮತ್ತು ಆಸ್ತಿ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಒಳ ಉಡುಪಿನಲ್ಲಿ ಚಿನ್ನದ ಪೌಡರ್ ಇಟ್ಟುಕೊಂಡು ಅಕ್ರಮ ಸಾಗಾಟ: ಮೆಟ್ರೋ ಸ್ಟೇಷನ್ ನಲ್ಲಿ ತಪಾಸಣೆ ವೇಳೆ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿಯನ್ನು ಬೆನ್ನಟ್ಟಿ ಹಿಡಿದ ಭದ್ರತಾ ಸಿಬ್ಬಂದಿ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಒಳೌಡುಪಿನಲ್ಲಿ ಚಿನ್ನದ ಪೌಡರ್ ಇಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ದೆಹಲಿಯ ಜಾಮಾ ಮಸೀದಿ ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ. ಪರಿಶೀಲಿಸಿದಾಗ ಒಳ ಉಡುಪಿನಲ್ಲಿ 155 ಗ್ರಾಂ ಚಿನ್ನದ ಪುಡಿ ಇರುವುದು ಪತ್ತೆಯಾಗಿದೆ.

ತಪಾಸಣೆ ವೇಳೆ ಸ್ಕ್ಯಾನರ್‌ನಲ್ಲಿ ಅನುಮಾನಾಸ್ಪದ ವಸ್ತುವೊಂದು ಕಂಡುಬಂದಾಗ ಆರೋಪಿ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದ. ಆದರೆ, ನಿರ್ಗಮನ ದ್ವಾರದ ಬಳಿ ಸಿಐಎಸ್‌ಎಫ್ ಸಿಬ್ಬಂದಿ ಆತನನ್ನು ಹಿಡಿದಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ ಚಿನ್ನದ ಪುಡಿ ಪತ್ತೆಯಾಗಿದೆ.

ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಮೊಹಮ್ಮದ್ ಶೋಯೆಬ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಮುಜಾಫರ್‌ನಗರದವನೆಂದು ತಿಳಿದುಬಂದಿದೆ. ಅಲ್ಲದೇ ಮಲೇಷ್ಯಾದ ಕೌಲಾಲಂಪುರದಲ್ಲಿಯೂ ಮನೆ ಇರುವುದಾಗಿ ಆತ ಹೇಳಿಕೊಂಡಿದ್ದಾನೆ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಆರಂಭದಲ್ಲಿ ಇದು ಮಾದಕ ವಸ್ತುವಿರಬಹುದೆಂದು ಶಂಕಿಸಿದ ಪೊಲೀಸರು, ಮಾದಕ ದ್ರವ್ಯ ನಿಯಂತ್ರಣ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಧಿಕಾರಿಗಳ ಪರಿಶೀಲನೆ ಬಳಿಕ ಅದು ಮಾದಕ ವಸ್ತುವಲ್ಲ ಎಂಬುದು ತಿಳಿದು ಬಂದಿದೆ.

ವಿಚಾರಣೆ ವೇಳೆ ಶೋಯೆಬ್‌, ತಾನು ಮಲೇಷ್ಯಾದ ಜವಳಿ ವಲಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಮಲೇಷ್ಯಾ ಮೂಲದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸಿದ್ದಾನೆ.

ಅ.16 ರಂದು ಚಿನ್ನವನ್ನು ದೆಹಲಿಗೆ ತಂದಿದ್ದು, ಜಾಮಾ ಮಸೀದಿ ಪ್ರದೇಶದ ಹೋಟೆಲ್ ಒಂದರಲ್ಲಿ ತಂಗಿದ್ದೆ. ಲಜಪತ್ ನಗರಕ್ಕೆ ಹೋಗಲು ಮೆಟ್ರೋ ನಿಲ್ದಾಣಕ್ಕೆ ಬಂದಿದ್ದೆ ಎಂದು ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ಕಸ್ಟಮ್ಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ.

ಪತ್ತೆಯಾದ ವಸ್ತುವಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಅಥವಾ ಅದನ್ನು ಏಕೆ ಸಾಗಿಸುತ್ತಿದ್ದೆ ಎಂಬುದಕ್ಕೆ ಸಮರ್ಪಕವಾದ ವಿವರಣೆ ನೀಡಲು ಶೋಯೆಬ್ ವಿಫಲನಾಗಿದ್ದಾನೆ. ಆರೋಪಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular