ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಂದು ವಿಶೇಷ ರಜೆ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಸಾಲು ಸಾಲು ನಾಲ್ಕು ದಿನಗಳ ಕಾಲ ರಜೆ ಇರಲಿದೆ.
ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಹಿನ್ನೆಲೆಯಲ್ಲಿ ಅರ್ಹ ಮತದಾರರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಅಕ್ಟೋಬರ್ 23 ರ ಶುಕ್ರವಾರದಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ವಾರಾಂತ್ಯದ ರಜೆಗಳು ಹಾಗೂ ಸರ್ಕಾರಿ ರಜೆ ಕೂಡ ಬಂದಿರುವುದರಿಂದ, ಮತದಾರ ನೌಕರರಿಗೆ ಸತತ 4 ದಿನಗಳ ಸರಣಿ ರಜೆ ಸಿಗಲಿದೆ.
ರಜೆ ಅನ್ವಯವಾಗುವುದು ಯಾವ ಕ್ಷೇತ್ರಕ್ಕೆ?
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ
ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ: ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ
ಬೆಂಗಳೂರು ಶಿಕ್ಷಕರ ಕ್ಷೇತ್ರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ)
ಚುನಾವಣಾ ಆಯೋಗವು ನಿಗದಿಪಡಿಸಿರುವಂತೆ, ಈ ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿರುವ ಅರ್ಹ ಪದವೀಧರರು ಹಾಗೂ ಶಿಕ್ಷಕ ಮತದಾರರು ಮತ ಚಲಾಯಿಸಲು ಈ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
ಅಕ್ಟೋಬರ್ 23 ರಂದು ಮತದಾನದ ರಜೆ ಸಿಗುತ್ತಿರುವುದರಿಂದ, ನೌಕರರಿಗೆ ಶುಕ್ರವಾರದಿಂದ ಸೋಮವಾರದವರೆಗೆ ಸತತ 4 ದಿನಗಳ ರಜೆ ಲಭ್ಯವಾಗಲಿದೆ.
ಅಕ್ಟೋಬರ್ 23 (ಶುಕ್ರವಾರ): ವಿಧಾನ ಪರಿಷತ್ ಚುನಾವಣೆ ಮತದಾನದ ವಿಶೇಷ ಸಾಂದರ್ಭಿಕ ರಜೆ.
ಅಕ್ಟೋಬರ್ 24 (ಶನಿವಾರ): ವಾರಾಂತ್ಯದ ರಜೆ / ಸರ್ಕಾರಿ ನೌಕರರಿಗೆ ರಜೆ.
ಅಕ್ಟೋಬರ್ 25 (ಭಾನುವಾರ): ಸಾರ್ವತ್ರಿಕ ವಾರದ ರಜೆ.
ಅಕ್ಟೋಬರ್ 26 (ಸೋಮವಾರ): ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ. ಸದುಪಯೋಗಪಡಿಸಿಕೊಳ್ಳಬಹುದು.
ಮತ ಚಲಾಯಿಸಲು ತಮ್ಮ ಊರುಗಳಿಗೆ ತೆರಳುವ ಮತದಾರರಿಗೆ ನಾಲ್ಕು ದಿನಗಳ ರಜೆ ಸಿಗಲಿದ್ದು,
ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೌಕರರು ತಮ್ಮ ಕಚೇರಿಯ ಸಕ್ಷಮ ಪ್ರಾಧಿಕಾರದಿಂದ (ಮೇಲಧಿಕಾರಿಗಳಿಂದ) ನಿಯಮಾನುಸಾರ ಪೂರ್ವಾನುಮತಿ ಪಡೆದಿರಬೇಕು. ಮತದಾರರಿಗೆ ಮಾತ್ರ ಸೀಮಿತ: ಇದು ಸಾರ್ವತ್ರಿಕ ರಜೆಯಾಗಿರುವುದಿಲ್ಲ. ಕೇವಲ ಮೇಲೆ ಉಲ್ಲೇಖಿಸಿದ ನಾಲ್ಕು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರಿರುವ ಅರ್ಹ ಶಿಕ್ಷಕರು ಹಾಗೂ ಪದವೀಧರರಿಗೆ ಮಾತ್ರ ಈ ರಜೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

