ಮೈಸೂರು: ರೀಲ್ಸ್ ಪ್ರಿಯರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಗ್ ಆಫರ್ ನೀಡಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರವು ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ವಿಶೇಷ ರೀಲ್ಸ್ ಸ್ಪರ್ಧೆಯನ್ನು ಪ್ರಕಟಿಸಿದೆ.
ಮೈಸೂರು ದಸರಾ ಕಂಬಳ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅತ್ಯಾಕರ್ಷಕ ಆಫರ್ ಅನ್ನು ಘೋಷಿಸಿದ್ದಾರೆ. ಯುವಕರು-ಯುವತಿಯರು ರೀಲ್ ಮಾಡಿ ದಸರಾ ಸಂಭ್ರಮವನ್ನು ಹಂಚಿಕೊಳ್ಳಿ. ಉತ್ತಮವಾದ 100 ರೀಲ್ಸ್ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತೇವೆ. ಮೈಸೂರು ದಸರಾದ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಯಾವುದೇ ಇರಲಿ. ಯಾವುದೇ ರೀಲ್ ಕಳುಹಿಸಿದ್ರು, ಆಯ್ಕೆ ಮಾಡಿ ಬೆಸ್ಟ್ 100 ರೀಲ್ಸ್‌ಗೆ ಬಹುಮಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ದಸರಾ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಸರ್ಕಾರವು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸ್ಪರ್ಧೆಯ ಪ್ರಮುಖ ವಿವರಗಳು ಇಲ್ಲಿವೆ.
ದಸರಾ ಕಾರ್ಯಕ್ರಮಗಳ ಕುರಿತು ಸಿದ್ಧಪಡಿಸಲಾಗುವ ರೀಲ್ಸ್‌ಗಳ ಪೈಕಿ ಅತ್ಯುತ್ತಮ 100 ರೀಲ್ಸ್‌ಗಳನ್ನು ಆಯ್ಕೆ ಮಾಡಿ ಸರ್ಕಾರದ ವತಿಯಿಂದ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುತ್ತದೆ.
ಮೈಸೂರು ದಸರಾದ ಭವ್ಯ ದೀಪಾಲಂಕಾರ, ಪ್ರಸಿದ್ಧ ಜಂಬೂ ಸವಾರಿ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ದಸರಾ ಸಂಭ್ರಮದ ಯಾವುದೇ ಸುಂದರ ಕ್ಷಣಗಳನ್ನು ಆಧರಿಸಿ ನೀವು ರೀಲ್ಸ್ ಮಾಡಬಹುದು.
ಜಿಲ್ಲಾಡಳಿತದ ಮೂಲಕ ಅತ್ಯುತ್ತಮ ರೀಲ್ಸ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ರೀಲ್ಸ್ ನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ. @mysoredasara_2026 ಅನ್ನು ಟ್ಯಾಗ್ ಮಾಡಿ.
ರೀಲ್ಸ್ ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ ಮತ್ತು ಬಳಸಬೇಕಾದ ಅಧಿಕೃತ ಹ್ಯಾಶ್‌ಟ್ಯಾಗ್/ಟ್ಯಾಗ್‌ಗಳ ಸಂಪೂರ್ಣ ನಿಯಮಾವಳಿಗಳ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಜಿಲ್ಲಾಡಳಿತದಿಂದ ಹೊರಬರಲಿದೆ.
ದಾಂಡಿಯಾ ನೃತ್ಯದ ವೇಳೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಬಾಗಲಕೋಟೆ: ನಾಡಿನಾದ್ಯಂತ ನವರಾತ್ರಿ ದಸರಾ ಸಂಭ್ರಮ-ಸಡಗರ ಮನೆ ಮಾಡಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮದ ವೇಳೆ ಘೋರ ಘಟನೆಯೊಂದು ನಡೆದಿದೆ. ದಾಅಂಡಿಯಾ ನೃತ್ಯದ ವೇಳೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದ ವಿನಾಯಕ ನಗರದಲ್ಲಿ ದಸರಾ ಪ್ರಯುಕ್ತ ಜನರು ದಾಂಡಿಯಾ ನೃತ್ಯದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಚಾಕು ಇರಿದು ಯುವಕನನ್ನ ಕೊಲೆ ಮಾಡಿದ್ದಾರೆ.
ಶ್ರೀನಿವಾಸ ಕದರಿ ಎಂಬುವವನಿಂದ ನಿತಿನ್ ನಿಂಬಾಳ್ಕರ್(25)ನ ಹತ್ಯೆ ಮಾಡಲಾಗಿದೆ. ಸಂಜು ಎಂಬುವವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಧೋಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಹಿನ್ನೆಲೆಯಲ್ಲಿ ವಿನಾಯಕ ನಗರದಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶ್ರೀನಿವಾಸ್ ಕದರಿ ಎಂಬ ಯುವಕ ಬಂದಿದ್ದಾನೆ. ಈತ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದ ಎನ್ನಲಾಗಿದೆ. ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ. ಅಲ್ಲದೇ ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್ ಮಾಡಿದ್ದಾನೆ.
ಅಲ್ಲಿದ್ದ ನಿತಿನ್ ನಿಂಬಾಳ್ಕರ್, ‘ಇಲ್ಲಿಂದ ಹೋಗು’ ಎಂದು ಶ್ರೀನಿವಾಸ್ಗೆ ಹೇಳಿದ್ದಾನೆ. ಆದರೂ ಆತ ಹೋಗದೇ ಅಲ್ಲಿಯೇ ಗಲಾಟೆ ಮಾಡುತ್ತಿದ್ದ. ನಿತಿನ್ ಒಂದೇಟು ಹೊಡೆದು ಕಳಿಸಿದ್ದಾನೆ. ಅಲ್ಲಿಂದ ತನ್ನ ಏರಿಯಾಗೆ ಹೋದ ಶ್ರೀನಿವಾಸ್, ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್‌ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜೊತೆ ಜಗಳ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಶ್ರೀನಿವಾಸ್ ಕದರಿ, ಚಾಕುವಿನಿಂದ ನಿತಿನ್ ನ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.
ಇನ್ನು ಜಗಳ ಬಿಡಿಸಲು ಬಂದ ನಿತಿನ್ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್ಗೂ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

