ನವದೆಹಲಿ: ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ಹಾಗೂ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮತ್ತೊಮ್ಮೆ ತಮ್ಮ ಸರಳತೆ ಮತ್ತು ಆತ್ಮೀಯ ನಡವಳಿಕೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಹೋದರ-ಸಹೋದರಿಯರಿಗೆ ದ್ರಾವಿಡ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು, ಈ ವೇಳೆ ಅವರಲ್ಲಿ ಒಬ್ಬರು ಆಟೋಗ್ರಾಫ್ ಕೇಳಿದ್ದಾರೆ. ಅಭಿಮಾನಿಯ ಮನವಿಗೆ ಪ್ರೀತಿಯಿಂದ ಸ್ಪಂದಿಸಿದ ದ್ರಾವಿಡ್ ಸಹಿ ಹಾಕಿಕೊಟ್ಟಿದ್ದಾರೆ. ಈ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನ @bhai.saaabb ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 24 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮೈದಾನದ ಹೊರಗೂ ದ್ರಾವಿಡ್ ತೋರಿದ ಸರಳತೆ ಮತ್ತು ಅಭಿಮಾನಿಗಳೊಂದಿಗಿನ ಆತ್ಮೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಮಾನದಲ್ಲಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ದ್ರಾವಿಡ್
ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಹೋದರ-ಸಹೋದರಿಯರು ರಾಹುಲ್ ದ್ರಾವಿಡ್ ಅವರನ್ನು ಗುರುತಿಸಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಂಡು ಖುಷಿಯಾದ ಅವರಲ್ಲಿ ಒಬ್ಬರು ಆಟೋಗ್ರಾಫ್ ಕೇಳಿದ್ದಾರೆ. ಮತ್ತೊಬ್ಬರು ಈ ಅಪರೂಪದ ಕ್ಷಣವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
ಅಭಿಮಾನಿಯ ಮನವಿಗೆ ಸ್ಪಂದಿಸಿದ ದ್ರಾವಿಡ್ ಸಹಿ ಹಾಕಿಕೊಟ್ಟಿದ್ದು, ಅವರ ಈ ಸರಳ ನಡೆ ಅಭಿಮಾನಿಗಳಿಗೆ ಸಂತಸ ತಂದಿದೆ. ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕವೂ ಅದೇ ಗುಂಪಿಗೆ ದ್ರಾವಿಡ್ ಮತ್ತೆ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಬಸ್ನಲ್ಲಿ ಅವರನ್ನು ಕಂಡ ಅಭಿಮಾನಿಗಳು ಮತ್ತೊಮ್ಮೆ ಈ ಕ್ಷಣವನ್ನು ಸೆರೆಹಿಡಿದಿದ್ದಾರೆ.
ಒಂದೇ ಪ್ರಯಾಣದಲ್ಲಿ ಎರಡು ಬಾರಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ನೋಡುವ ಅವಕಾಶ ಸಿಕ್ಕಿದ್ದು, ಈ ಸಹೋದರ-ಸಹೋದರಿಯರಿಗೆ ಮರೆಯಲಾಗದ ಅನುಭವವಾಗಿದೆ.
ಮತ್ತೆ ವೈರಲ್ ಆಯ್ತು ‘ಇಂದಿರಾನಗರ ಕಾ ಗುಂಡಾ’ ಮೀಮ್
ಈ ವಿಡಿಯೋಗೆ, “ಇಂದಿರಾನಗರ ಕಾ ಗುಂಡಾ, ನಿಜ ಜೀವನದಲ್ಲಿ ಅವರು ತುಂಬಾ ಸೌಮ್ಯ ವ್ಯಕ್ತಿ” ಎಂಬ ಅರ್ಥದ ಶೀರ್ಷಿಕೆಯನ್ನು ನೀಡಲಾಗಿದೆ. ಇದು ರಾಹುಲ್ ದ್ರಾವಿಡ್ ಅಭಿನಯಿಸಿದ್ದ ಜನಪ್ರಿಯ ಜಾಹೀರಾತಿನಿಂದ ಹುಟ್ಟಿಕೊಂಡ ‘ಇಂದಿರಾನಗರ ಕಾ ಗುಂಡಾ’ ಮೀಮ್ಗೆ ಸಂಬಂಧಿಸಿದೆ.
ಆ ಜಾಹೀರಾತಿನಲ್ಲಿ ಸಾಮಾನ್ಯವಾಗಿ ಶಾಂತ ಸ್ವಭಾವದವರಾಗಿ ಗುರುತಿಸಿಕೊಂಡಿರುವ ದ್ರಾವಿಡ್, ಟ್ರಾಫಿಕ್ನಲ್ಲಿ ಸಿಲುಕಿದಾಗ ಸಿಟ್ಟಿನಿಂದ ವರ್ತಿಸುವುದನ್ನು ತೋರಿಸಲಾಗಿತ್ತು. ಬಳಿಕ ಅವರು “ಇಂದಿರಾನಗರ ಕಾ ಗುಂಡಾ ಹೂಂ ಮೈ” ಎಂದು ಹೇಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು.
ನೈಜ ಜೀವನದಲ್ಲಿ ದ್ರಾವಿಡ್ ಅವರ ಶಾಂತ ಸ್ವಭಾವಕ್ಕೂ ಜಾಹೀರಾತಿನಲ್ಲಿನ ಆಕ್ರಮಣಕಾರಿ ಪಾತ್ರಕ್ಕೂ ಇರುವ ವ್ಯತ್ಯಾಸವೇ ಈ ಮೀಮ್ನ ವಿಶೇಷತೆ. ಇದೀಗ ವಿಮಾನದಲ್ಲಿ ಅಭಿಮಾನಿಯೊಂದಿಗೆ ಆತ್ಮೀಯವಾಗಿ ನಡೆದುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಈ ಜನಪ್ರಿಯ ಸಂಭಾಷಣೆ ಮತ್ತೆ ನೆಟ್ಟಿಗರ ಗಮನ ಸೆಳೆದಿದೆ.
ಕ್ರಿಕೆಟ್ ಮೈದಾನದಲ್ಲಿ ಶಿಸ್ತು ಮತ್ತು ತಾಳ್ಮೆಗೆ ಹೆಸರಾದ ರಾಹುಲ್ ದ್ರಾವಿಡ್, ಮೈದಾನದ ಹೊರಗೂ ಅಭಿಮಾನಿಗಳೊಂದಿಗೆ ಸರಳವಾಗಿ ನಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

