ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಅಕ್ರಮ ಬಯಲಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳು ಹಾಗೂ ನಗದು ಹಣವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಮಹಿಳಾ ವಿಚಾರಣಾಧೀನ ಕೈದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಜೈಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಹಿಳಾಅ ಕೈದಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 11,500 ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಘಟನೆಯು ಜೈಲಿನ ಭದ್ರತಾ ವ್ಯವಸ್ಥೆಯ ಮೇರೆಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನ್ಯಾಯಾಲಯದ ವಿಚಾರಣೆ ಬಳಿಕ ಜೈಲಿಗೆ ಮರಳಿದ ಮಹಿಳಾ ಕೈದಿಯು, ಜೈಲಿನ ಮುಖ್ಯ ದ್ವಾರದಲ್ಲಿ ಸಿಬ್ಬಂದಿ ನಡೆಸಿದ ಕಡ್ಡಾಯ ತಪಾಸಣೆಯ ವೇಳೆ ಸಿಕ್ಕಿಬಿದ್ದಿದ್ದಾಳೆ. ಜೈಲಿನೊಳಗೆ ಹಣವನ್ನು ಕೊಂಡೊಯ್ಯುವುದು ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿದ್ದರೂ, ಈಕೆಯು ಯಾರ ಕಣ್ಣಿಗೂ ಬೀಳದಂತೆ ಅತ್ಯಂತ ಚಾಣಾಕ್ಷತನದಿಂದ ಹಣವನ್ನು ಬಚ್ಚಿಟ್ಟುಕೊಂಡು ಒಳನುಗ್ಗಲು ಯತ್ನಿಸಿದ್ದಾಳೆ.
ಆದರೆ, ಎಚ್ಚರದಿಂದಿದ್ದ ಮಹಿಳಾ ಜೈಲು ಸಿಬ್ಬಂದಿ ತಪಾಸಣೆ ಮಾಡುವಾಗ ಈ ಅಕ್ರಮ ಕೃತ್ಯ ಬೆಳಕಿಗೆ ಬಂದಿದೆ. ಜೈಲಿನ ಒಳಗಡೆ ಕೈದಿಗಳ ನಡುವೆ ಅಕ್ರಮ ಹಣಕಾಸು ವಹಿವಾಟು ನಡೆಸಲು ಈ ಹಣವನ್ನು ಸಾಗಿಸಲಾಗುತ್ತಿತ್ತೇ? ಎಂಬ ಶಂಕೆ ವ್ಯಕ್ತವಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ಪದೇ ಪದೇ ಬೆಳಕಿಗೆ ಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿಂದೆ ಕೂಡ ಜೈಲಿನೊಳಗೆ ಮೊಬೈಲ್ ಫೋನ್ಗಳು, ಗಾಂಜಾ ಹಾಗೂ ಇತರೆ ವಸ್ತುಗಳ ಪೂರೈಕೆ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಎಲೆಕ್ಟ್ರಾನಿಕ್ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದು, ಆರೋಪಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ವಿಚಾರಣಾಧೀನ ಕೈದಿಗೆ ಜೈಲಿನೊಳಗೆ ಹಣ ಸಾಗಿಸಲು ಯಾರು ಸಹಾಯ ಮಾಡಿದರು ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮಾಧ್ಯಮ ಪ್ರತಿನಿಧಿಗಳೆಂದು ಹೇಳಿ ಸ್ಪಾ ಮತ್ತು ಸಲೂನ್ ಸಿಬ್ಬಂದಿ ಮೇಲೆ ಹಲ್ಲೆ: ಹಣ ಸುಲಿಗೆ ಮಾಡಿದ್ದ ನಾಲ್ವರು ಮಹಿಳೆಯರು ಸೇರಿ 6 ಆರೋಪಿಗಳು ಅರೆಸ್ಟ್
ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳೆಂದು ಹೇಳಿಕೊಂಡು ಸ್ಪಾ ಹಾಗೂ ಸಲೂನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮಾಲೀಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ ಗ್ಯಾಂಗ್ ಒಂದನ್ನು ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಈರಮ್ಮ, ಸಗಾಯಿ ಮೇರಿ, ಮಮತಾ, ಪಿಯಾ, ಯೋಗಾಬು ಹಾಗೂ ಮೊಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದೆ.
ಈ ಗ್ಯಾಂಗ್ ಅಕ್ಟೋಬರ್ 3 ರ ರಾತ್ರಿ ವಿದ್ಯಾರಣ್ಯಪುರ ಮುಖ್ಯರಸ್ತೆಯ ನಂಜಪ್ಪ ಲೇಔಟ್ನಲ್ಲಿರುವ ಸ್ಪಾ ಮತ್ತು ಸಲೂನ್ಗೆ ನುಗ್ಗಿ, ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೆಂದು ಸುಳ್ಳು ಆರೋಪ ಹೊರಿಸಿ ಸಿಬ್ಬಂದಿಯನ್ನು ಬೆದರಿಸಿದೆ.
ಅಲ್ಲದೆ, ಸ್ಪಾ ಕುರಿತ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಹೆದರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಆರಂಭದಲ್ಲಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು, ಕೊನೆಗೆ ಬಲವಂತವಾಗಿ ಹಣವನ್ನು ವಸೂಲಿ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಸಾಯಿ ನಗರ ನಿವಾಸಿ ಹಾಗೂ ಸ್ಪಾ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡು ಕೆ.ಆರ್. ಸರ್ಕಲ್ ಬಳಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 80,000 ರೂ. ನಗದು, 7 ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇತರೆ ಸುಲಿಗೆ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿರುವ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

