ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳೆಂದು ಹೇಳಿಕೊಂಡು ಸ್ಪಾ ಹಾಗೂ ಸಲೂನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮಾಲೀಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ ಗ್ಯಾಂಗ್ ಒಂದನ್ನು ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಈರಮ್ಮ, ಸಗಾಯಿ ಮೇರಿ, ಮಮತಾ, ಪಿಯಾ, ಯೋಗಾಬು ಹಾಗೂ ಮೊಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದೆ.
ಈ ಗ್ಯಾಂಗ್ ಅಕ್ಟೋಬರ್ 3 ರ ರಾತ್ರಿ ವಿದ್ಯಾರಣ್ಯಪುರ ಮುಖ್ಯರಸ್ತೆಯ ನಂಜಪ್ಪ ಲೇಔಟ್ನಲ್ಲಿರುವ ಸ್ಪಾ ಮತ್ತು ಸಲೂನ್ಗೆ ನುಗ್ಗಿ, ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೆಂದು ಸುಳ್ಳು ಆರೋಪ ಹೊರಿಸಿ ಸಿಬ್ಬಂದಿಯನ್ನು ಬೆದರಿಸಿದೆ.
ಅಲ್ಲದೆ, ಸ್ಪಾ ಕುರಿತ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಹೆದರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಆರಂಭದಲ್ಲಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು, ಕೊನೆಗೆ ಬಲವಂತವಾಗಿ ಹಣವನ್ನು ವಸೂಲಿ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಸಾಯಿ ನಗರ ನಿವಾಸಿ ಹಾಗೂ ಸ್ಪಾ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡು ಕೆ.ಆರ್. ಸರ್ಕಲ್ ಬಳಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 80,000 ರೂ. ನಗದು, 7 ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇತರೆ ಸುಲಿಗೆ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿರುವ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ದಸರಾ ರಜೆ ಹಿನ್ನೆಲೆ: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್: 6 ಗಂಟೆಗಳ ಕಾಲ ನಿರಂತರ ರಸ್ತೆಯಲ್ಲೇ ಪರದಾಡಿದ ವಾಹನ ಸವಾರರು
ಬೆಂಗಳೂರು: ದಸರಾ ಹಬ್ಬದ ರಜೆ ಹಿನ್ನಲೆಯಲ್ಲಿ ಬೆಂಗಳೂರಿನ ಬಹುತೇಕರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದು, ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಪರದಾಡುವ ಸ್ಥಿತಿ ಉಂಟಾಯಿತು.
ಶುಕ್ರವಾರದಿಂದಲೇ ಊರುಗಳಿಗೆ ತೆರಳು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿಯೂ ಶನಿವಾರ ರಾತ್ರಿಯಂತು ಬೆಂಗಳೂರು ನಗರದಲ್ಲಿ ಮಳೆಯ ಜೊತೆಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.
ಮಧ್ಯರಾತ್ರಿವರೆಗೂ ನೆರೆ ಜಿಲ್ಲೆ ಹಾಗೂ ಕರ್ನಾಟಕದ್ ಇತರ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಸಾಲು ಸಾಲು ರಜೆ ಸಿಕ್ಕಿರುವ ಕಾರಣ ನಗರದಲ್ಲಿ ಕೆಲಸ ಮಾಡುವ ಜನರು ತಮ್ಮ ಸ್ವಂತ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ಶನಿವಾರವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರವನ್ನು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ಹೊರವಲಯಗಳು ಹಾಗೂ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ಯಶವಂತಪುರ ಸರ್ಕಲ್ ಮತ್ತು ಗೊರಗುಂಟೆಪಾಳ್ಯ ರಸ್ತೆಗಳಲ್ಲಿ ಮಧ್ಯರಾತ್ರಿ 1 ಗಂಟೆಯಾದರೂ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ರಾಜಾಜಿನಗರದಿಂದ ಯಶವಂತಪುರ ತಲುಪಲು ಎರಡು ಗಂಟೆಗೂ ಹೆಚ್ಚು ಸಮಯ ತಗುಲಿದ ಬಗ್ಗೆ ಪ್ರಯಾಣಿಕರು ತಿಳಿಸಿದ್ದಾರೆ. ಮಳೆ ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಊರುಗಳಿಗೆ ಹೊರಟಿರುವುದು ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಭಾರಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಹಲವು ವಾಅಹನ ಸವಾರರು ಬರೋಬ್ಬರಿ 6 ಗಂಟೆಗಳ ಕಾಲ ರಸ್ತೆಯಲ್ಲಿಯೇ ಪರದಾಡಿದ್ದಾರೆ. ನಗರವನ್ನು ನೆರೆಯ ಜಿಲ್ಲೆಗಳು ಮತ್ತು ಕರ್ನಾಟಕದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿತು.
ಪ್ರಯಾಣಿಕರನ್ನು ಅವರ ಊರುಗಳಿಗೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ಗಳು ಕೂಡ ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದವು. ಕೆಲವು ಬಸ್ಗಳು ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಮಾತ್ರ ಬೆಂಗಳೂರಿನಿಂದ ಹೊರಬರಲು ಸಾಧ್ಯವಾಯಿತು ಎಂದು ವರದಿಯಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಸತತವಾಗಿ ಬಂದ ರಜೆಗಳಿಂದಾಗಿ ಈ ಭಾರಿ ದಟ್ಟಣೆ ಉಂಟಾಯಿತು

