HomeInternationalನಂಬಿಕೆ ದ್ರೋಹ ಮಾಡಿದ ನರ್ಸ್‌! 99 ವರ್ಷದ ವೃದ್ಧೆಯನ್ನು ವಂಚಿಸಿ ಬರೋಬ್ಬರಿ ₹9.6 ಕೋಟಿ ದೋಚಿದಳು!

ನಂಬಿಕೆ ದ್ರೋಹ ಮಾಡಿದ ನರ್ಸ್‌! 99 ವರ್ಷದ ವೃದ್ಧೆಯನ್ನು ವಂಚಿಸಿ ಬರೋಬ್ಬರಿ ₹9.6 ಕೋಟಿ ದೋಚಿದಳು!

ಲಂಡನ್‌/ಯುಕೆ: ವೃದ್ಧೆಯ ಆರೈಕೆ ಮಾಡುತ್ತೇನೆ ಎಂದು ನಂಬಿಸಿ, ಆಕೆಯ ಆಸ್ತಿ ಮತ್ತು ಹಣವನ್ನೇ ಲೂಟಿ ಮಾಡಿದ ನರ್ಸ್‌ ಒಬ್ಬಳ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನನ್ನು ನಂಬಿದ್ದ 99 ವರ್ಷದ ವೃದ್ಧೆಯನ್ನು ವಂಚಿಸಿದ ನರ್ಸ್‌, ಬರೋಬ್ಬರಿ ₹9.6 ಕೋಟಿ ಮೌಲ್ಯದ ಆಸ್ತಿ ಹಾಗೂ ಹಣವನ್ನು ಕಬಳಿಸಿ ಐಷಾರಾಮಿ ಜೀವನ ನಡೆಸಿದ್ದಾಳೆ. ಈ ಘಟನೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಯುಕೆ) ಭಾರೀ ಚರ್ಚೆಗೆ ಕಾರಣವಾಗಿದೆ.

ನರ್ಸ್‌ ವಿರುದ್ಧ ತನಿಖೆ ನಡೆಸಿದ ನರ್ಸಿಂಗ್‌ ಆ್ಯಂಡ್ ಮಿಡ್‌ವೈಫರಿ ಕೌನ್ಸಿಲ್‌ (NMC), ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಯಾರು ಈ ನರ್ಸ್‌?

ರೆಬೆಕ್ಕಾ ಬರ್‌ವುಡ್‌ (Rebecca Burwood) ಎಂಬ ನರ್ಸ್‌ ಈ ಕೃತ್ಯ ಎಸಗಿದ ಆರೋಪ ಎದುರಿಸಿದ್ದಾಳೆ. 2002ರಲ್ಲಿ ನರ್ಸ್‌ ಆಗಿ ನೋಂದಾಯಿಸಿಕೊಂಡಿದ್ದ ಆಕೆ, ವೇಲ್ಸ್‌ನ ಫ್ಲಿಂಟ್‌ಶೈರ್‌ನಲ್ಲಿರುವ ‘ಬ್ರಿನ್ ಯರ್ ಹಾಲ್ ಕೇರ್ ಹೋಮ್‌’ನಲ್ಲಿ ಉಪ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ದಿ ಇಂಡಿಪೆಂಡೆಂಟ್‌’ ವರದಿಯ ಪ್ರಕಾರ, 2017ರಲ್ಲಿ ಬಿದ್ದು ಗಾಯಗೊಂಡಿದ್ದ 99 ವರ್ಷದ ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ರೆಬೆಕ್ಕಾ ಆಕೆಯ ನಂಬಿಕೆ ಗಳಿಸಿದ್ದಳು. ಬಳಿಕ ಸುಮಾರು ₹5 ಕೋಟಿ ಮೌಲ್ಯದ ವೃದ್ಧೆಯ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳುವಂತೆ ಮಾಡಿದ್ದಳು.

ತನ್ನ ಮನೆಯ ವಿಸ್ತರಣಾ ಕಾಮಗಾರಿಗೂ ವೃದ್ಧೆಯಿಂದ ಹಣ ಪಡೆದಿದ್ದಳು. ಭವಿಷ್ಯದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಕಾರಣ ಲಾಕ್‌ಡೌನ್‌ ಜಾರಿಯಾದರೆ, ವೃದ್ಧೆಯನ್ನು ತನ್ನೊಂದಿಗೆ ಇರಿಸಿಕೊಳ್ಳಲು ಹೆಚ್ಚುವರಿ ಜಾಗ ಬೇಕಾಗುತ್ತದೆ ಎಂದು ಆಕೆ ಸಮರ್ಥಿಸಿಕೊಂಡಿದ್ದಳು.

ಇದಲ್ಲದೆ, ವೃದ್ಧೆಯ ಹೆಸರಿನಲ್ಲಿ ಲಾಸ್ಟಿಂಗ್ ಪವರ್ ಆಫ್ ಅಟಾರ್ನಿ (LPA) ಅಧಿಕಾರವನ್ನೂ ಪಡೆದುಕೊಂಡಿದ್ದಳು. ಇದರಿಂದ ವೃದ್ಧೆಯ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವ ಅವಕಾಶ ಆಕೆಗೆ ಸಿಕ್ಕಿತ್ತು. ಹೀಗೆ ಕಳೆದ ಐದು ವರ್ಷಗಳಲ್ಲಿ ಸುಮಾರು ₹4.6 ಕೋಟಿ ನಗದನ್ನು ದುರುಪಯೋಗಪಡಿಸಿಕೊಂಡಿದ್ದಳು ಎಂದು ವರದಿಯಾಗಿದೆ.

ಕದ್ದ ಹಣದಲ್ಲಿ ಐಷಾರಾಮಿ ಜೀವನ!

ವೃದ್ಧೆಯಿಂದ ಪಡೆದ ಹಣವನ್ನು ರೆಬೆಕ್ಕಾ ತನ್ನ ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಳು. ತನ್ನ ಮನೆಯ ದುರಸ್ತಿ, ವಿದ್ಯುತ್‌ ಬಿಲ್‌ಗಳು ಮತ್ತು ಕೌನ್ಸಿಲ್‌ ತೆರಿಗೆ ಪಾವತಿಸಲು ಹಣ ಖರ್ಚು ಮಾಡಿದ್ದಳು.

ವೃದ್ಧೆಯನ್ನು ಪ್ರವಾಸಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಕಾರು ಮತ್ತು ಕ್ಯಾಂಪರ್‌ ವ್ಯಾನ್‌ ಖರೀದಿಸಿದ್ದಳು. ಅಷ್ಟೇ ಅಲ್ಲದೆ, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಹಾಗೂ ಬ್ಯೂಟಿ ಟ್ರೀಟ್‌ಮೆಂಟ್‌ಗಳಿಗೂ ಹಣವನ್ನು ಬಳಸಿಕೊಂಡಿದ್ದಳು.

ಬ್ಯಾಂಕ್‌ ಅಧಿಕಾರಿಗಳಿಂದ ಬಯಲಾಯ್ತು ವಂಚನೆ!

ವೃದ್ಧೆಯ ಬ್ಯಾಂಕ್‌ ಖಾತೆಯಿಂದ ದೊಡ್ಡ ಮೊತ್ತದ ಹಣ ಹಿಂಪಡೆಯಲಾಗುತ್ತಿರುವುದನ್ನು ಗಮನಿಸಿದ ಬ್ಯಾಂಕ್‌ ಅಧಿಕಾರಿಗಳಿಗೆ ಅನುಮಾನ ಮೂಡಿತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದರು.

ನಂತರ ಫ್ಲಿಂಟ್‌ಶೈರ್ ಕೌನ್ಸಿಲ್‌ ಈ ಪ್ರಕರಣವನ್ನು ನರ್ಸಿಂಗ್‌ ಆ್ಯಂಡ್ ಮಿಡ್‌ವೈಫರಿ ಕೌನ್ಸಿಲ್‌ಗೆ ವರದಿ ಮಾಡಿತು. ತನಿಖೆಯ ವೇಳೆ ವೃದ್ಧೆಯ ಒಂಟಿತನ ಮತ್ತು ಅಸಹಾಯಕತೆಯನ್ನು ರೆಬೆಕ್ಕಾ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಳು ಎಂಬುದು ಬಹಿರಂಗವಾಯಿತು.

ನರ್ಸಿಂಗ್‌ ನೋಂದಣಿಯಿಂದಲೇ ವಜಾ!

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನರ್ಸಿಂಗ್‌ ಆ್ಯಂಡ್ ಮಿಡ್‌ವೈಫರಿ ಕೌನ್ಸಿಲ್‌, ರೆಬೆಕ್ಕಾ ಬರ್‌ವುಡ್‌ಳನ್ನು ನರ್ಸಿಂಗ್‌ ನೋಂದಣಿಯಿಂದ ಸಂಪೂರ್ಣವಾಗಿ ತೆಗೆದುಹಾಕುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಆಕೆಯ ವೃತ್ತಿಪರ ನರ್ಸಿಂಗ್‌ ನೋಂದಣಿ ರದ್ದುಗೊಂಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular