ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರು ಸೇರಿದಂತೆ ಓರ್ವ ಸಿಬ್ಬಂದಿಯನ್ನ ಬಂಧಿಸಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 2.75 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಪ್ರಯಾಣಿಕರು ಹಾಗೂ ಅವರಿಗೆ ಸಾಥ್ ನೀಡಿದ ಓರ್ವ ಸಿಬ್ಬಂದಿ ಸೇರಿ ಮೂವರನ್ನು ಬಂಧಿಸಲಾಗಿದೆ.
ಸಿಂಗಾಪುರದಿಂದ ಬೆಂಗಳೂರು ಮೂಲಕ ದುಬೈಗೆ ತೆರಳಲು ಬಂದಿದ್ದ ಮೊಹಮ್ಮದ್ ಅಖಿಲ್ ಹಾಗೂ ದುಬೈನಿಂದ ಬೆಂಗಳೂರು ಮೂಲಕ ಮಾಲ್ಡೀವ್ಸ್ಗೆ ತೆರಳುತ್ತಿದ್ದ ಮೊಹಮ್ಮದ್ ನಾಸಿರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಶ್ರೀಲಂಕಾ ಪ್ರಜೆಗಳಾಗಿದ್ದು, ಟ್ರಾನ್ಸಿಕ್ ವಿಮಾನ ಮೂಲಕ ದುಬೈ ಮತ್ತು ಮಾಲ್ಡೀವ್ಸ್ಗೆ ತೆರಳಲು ಬಂದಿದ್ದರು.
ಈ ಪ್ರಯಾಣಿಕರು ಕೆಐಎಬಿಯಲ್ಲಿ ಟ್ರಾವೆಲ್ ಫುಡ್ ಸರ್ವಿಸ್ (ಟಿಎಫ್ಎಸ್) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಬಿನ್ ಜೋಸ್ ಎಂಬಾತನಿಗೆ ಈ ಚಿನ್ನ ನೀಡಲು ಪ್ಲ್ಯಾನ್ ಮಾಡಿದ್ದರು. ಆದರೆ, ಚಿನ್ನ ಹಸ್ತಾಂತರಿಸುವ ಮುನ್ನವೇ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ಇಬ್ಬರು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕೋಟ್ಯಂತರ ರೂ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ತಂದಿದ್ದ ನಾಲ್ವರು ಪ್ರಯಾಣಿಕರನ್ನು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಬ್ಯಾಂಕಾಕ್ ಮತ್ತು ವಿಯೆಟ್ನಾಂನಿಂದ ಬಂದಿದ್ದ ನಾಲ್ವರು ಪ್ರಯಾಣಿಕರ ಬ್ಯಾಗ್ನಲ್ಲಿ 80 ಕೆಜಿ ಹೈಡ್ರೋಪೋನಿಕ್ಸ್ ಗಾಂಜಾ ಪತ್ತೆಯಾಗಿತ್ತು. ಇದರ ಮಾರುಕಟ್ಟೆ ಮೌಲ್ಯ 28 ಕೋಟಿ ರೂ ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದರು.
ಇದೇ ವೇಳೆ ಕೌಲಲಾಂಪುರ ಮತ್ತು ಅಬುಧಾಬಿಯಿಂದ ಬೆಂಗಳೂರಿಗೆ ಬಂದಿದ್ದ ಮತ್ತಿಬ್ಬರು ಪ್ರಯಾಣಿಕರು ಸಹ ತಮ್ಮ ಬ್ಯಾಗ್ನಲ್ಲಿ ಅಕ್ರಮವಾಗಿ ಚಿನ್ನ ತಂದು ಸಿಕ್ಕಿಬಿದ್ದಿದರು. 1 ಕೋಟಿ 75 ಲಕ್ಷ ರೂ ಮೌಲ್ಯದ 1 ಕೆಜಿ 201 ಗ್ರಾಂ ಚಿನ್ನವನ್ನ ಬ್ಯಾಗ್ನಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದರು. ಈ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು. ಅಕ್ರಮ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.
ವಿಷಾಹಾರ ಸೇವಿಸಿ ಬಿಎಸ್ ಎಫ್ ನ 78 ಸಿಬ್ಬಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಇಂಫಾಲ: ಬೆಳಗಿನ ಉಪಹಾರ ಸೇಸಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಸಿಬ್ಬಂದಿ ಹಾಗೂ ಮೂವರು ನಾಗರಿಕರು ಸೇರಿದಂತೆ 78 ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಮಣಿಪುರದ ಬಿಎಸ್ ಎಫ್ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ. ಕ್ಯಾಂಪ್ ನಲ್ಲಿ ಬೆಳಿಗ್ಗೆ ನೀಡಲಾಗಿದ್ದ ಉಪಹಾರ ಸೇವಿಸಿದ ಬಳಿಕ ಎಸ್ ಎಫ್ ನ 75 ಸಿಬ್ಬಂದಿಗಳು ಹಾಗೂ ಮೂವರು ನಾಗರಿಕರು ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥರಾಗಿದ್ದಾರೆ. ಹಲವರಲ್ಲಿ ಪದೇ ಪದೇ ವಾಂತಿಯಾಗಿದೆ. ಇಡೀ ಕ್ಯಾಂಪ್ ಸಿಬ್ಬಂದಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.
ಅಸ್ವಸ್ಥರನ್ನು ತಕ್ಷಣ ಇಂಫಾಲದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವಿಸಿ ಫುಡ್ ಪಾಯಿಸನಿಂಗ್ ಆಗಿದೆ ಎಂದು ಆರ್ಐಎಂಎಸ್ (RIMS) ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಡಾ. ರಮೇಶ್ವರ್ ಸಿಂಗ್ ತಿಳಿಸಿದ್ದಾರೆ.
ಬೆಳಗಿನ ಉಪಹಾರ ಸೇವಿಸಿದ ನಂತರ ಬಿಎಸ್ಎಫ್ನ ಸಂಪೂರ್ಣ ತುಕಡಿಯ ಸಿಬ್ಬಂದಿಗೆ ಪದೇ ಪದೇ ವಾಂತಿಯಿಂದ ಬಳಲಿದ್ದಾರೆ. ತಕ್ಷಣ ಅವರನ್ನು ನಮ್ಮ ಒಪಿಡಿ (OPD) ವಿಭಾಗಕ್ಕೆ ಕರೆತರಲಾಯಿತು. ಇದೊಂದು ಆಹಾರ ವಿಷಬಾಧೆಯ ಪ್ರಕರಣವಾಗಿದೆ. ಅವರೆಲ್ಲರೂ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಅಗತ್ಯವಾದ ದ್ರವಾಹಾರವನ್ನು (fluids) ನೀಡುತ್ತಿದ್ದೇವೆ… ಕೆಲವೇ ಗಂಟೆಗಳಲ್ಲಿ ಎಲ್ಲ ರೋಗಿಗಳು ಗುಣಮುಖರಾಗಲಿದ್ದಾರೆ. ಇದರಲ್ಲಿ ಮೂವರು ನಾಗರಿಕರು ಸೇರಿದಂತೆ ಒಟ್ಟು 78 ಬಿಎಸ್ಎಫ್ ಸಿಬ್ಬಂದಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

