ಬೆಂಗಳೂರು: ಆರು ತಿಂಗಳ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ಕತ್ತರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರು ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಘಟನೆಯ ನಂತರ ಮಗುವನ್ನು ನಾಲ್ಕು ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಏನಾಯ್ತು ಎಂಬುದು ತಿಳಿಯಬೇಕಿದೆ. ಮಗುವಿನ ಆರೈಕೆಯಲ್ಲಿ ವೈದ್ಯರು ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದರೆ ಅಥವಾ ನಿಗದಿತ ವೈದ್ಯಕೀಯ ಶಿಷ್ಟಾಚಾರ ಅನುಸರಿಸದಿದ್ದರೆ ಅದು ನಿರ್ಲಕ್ಷ್ಯ ಪ್ರಕರಣವಾಗಬಹುದು.
ಹೀಗಾಗಿ ಪ್ರಕರಣದ ಬಗ್ಗೆ ವಸ್ತುನಿಷ್ಠ ತನಿಖೆ ನಡೆಸಬೇಕು. ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಎಂಬುದನ್ನು ನಿರ್ಧರಿಸಲು ತನಿಖಾ ಅಧಿಕಾರಿ ವಿಷಯ ತಜ್ಞರ ನೆರವು ಪಡೆದು ಸೂಕ್ತ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಪೊಲೀಸರಿಗೆ ನಿರ್ದೇಶನ ನೀಡಿದೆ.
ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಡ್ರಿಪ್ ಹಾಕಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಸೂಚಿಸಿದ ನಂತರ ನರ್ಸ್ ಡ್ರಿಪ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಕಿರುಬೆರಳು ಕತ್ತರಿಸಿದೆ ಎಂದು ಹೇಳಲಾಗಿದೆ. ಈ ಕುರಿತಾಗಿ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ರದ್ದು ಕೋರಿ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.
ಕರ್ತವ್ಯಕ್ಕೆ ಅನಧಿಕೃತ ಗೈರು: ಶಿಕ್ಷಕಿಗೆ ಅಂತಿಮ ನೋಟಿಸ್, ಸೇವೆಯಿಂದ ವಜಾಗೊಳಿಸುವ ಎಚ್ಚರಿಕೆ
ಬಳ್ಳಾರಿ: ಮೇಲಧಿಕಾರಿಗಳ ಅನುಮತಿಯಿಲ್ಲದೆ ಮತ್ತು ಶಾಲೆಗೆ ಯಾವುದೇ ಮಾಹಿತಿ ನೀಡದೆ ದೀರ್ಘಕಾಲದಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿರುವ ಶಿಕ್ಷಕಿಯೊಬ್ಬರಿಗೆ ಬಳ್ಳಾರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.
ಸಂಡೂರು ತಾಲೂಕಿನ ಯು ರಾಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ.ಪಿ.ಟಿ. ಶಿಕ್ಷಕಿ ಶಿಲ್ಪ.ಕೆ ಅವರು 23/06/2021 ರಿಂದ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ. 18/12/2021, 07/08/2023 ಹಾಗೂ 23/09/2024 ರಂದು ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಿದ್ದರೂ, ಅವರು ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ನೋಟಿಸ್ ಹಾಗೂ ಪ್ರಕಟಣೆಗಳ ಮೂಲಕ ಕರ್ತವ್ಯಕ್ಕೆ ಮರಳಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಶಿಕ್ಷಕಿ ಗೈರುಹಾಜರಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ಅಂತಿಮ ಪ್ರಕಟಣೆ ಹೊರಡಿಸಲಾಗಿದೆ. ಪ್ರಕಟಣೆ ಪ್ರಕಟವಾದ 7 ದಿನಗಳ ಒಳಗಾಗಿ ಬಳ್ಳಾರಿಯ ಶಾಲಾ ಶಿಕ್ಷಣ ಇಲಾಖೆಯ ಶಿಸ್ತುಪ್ರಾಧಿಕಾರಿ ಹಾಗೂ ಉಪನಿರ್ದೇಶಕರ (ಆಡಳಿತ) ಕಚೇರಿಗೆ ಖುದ್ದಾಗಿ ಹಾಜರಾಗಿ ರಕ್ಷಣಾ ಹೇಳಿಕೆಯನ್ನು ಸಲ್ಲಿಸಬೇಕು. ತಪ್ಪಿದಲ್ಲಿ, ಅವರ ಹೇಳಿಕೆಯೇನೂ ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ಸರ್ಕಾರದ ಆದೇಶ ಹಾಗೂ ಸಿ.ಸಿ.ಎ 1957ರ ನಿಯಮಗಳ ಭಾಗ-4, ನಿಯಮ 8ರ ಉಪನಿಯಮ (8) ರನ್ವಯ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಶಿಸ್ತುಪ್ರಾಧಿಕಾರಿಗಳು ತಿಳಿಸಿದ್ದಾರೆ.

